ಚಿಕ್ಕಮಗಳೂರು : ಮಾರ್ಗಮಧ್ಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣವಾಗಿ ಹೊತ್ತಿ ಉರಿದು, ಕಾರು ಚಾಲಕ ಸಜೀವವಾಗಿ ದಹನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ವಸ್ತಾರೆ ಎಂಬಲ್ಲಿ ನಡೆದಿದೆ.
ಆರೆನೂರು ನಿವಾಸಿ ರಘು ಎಂಬವರೇ ಕಾರಿನಲ್ಲಿ ಸಜೀವವಾಗಿ ದಹನವಾದವರು. ರಘು ಕಾಫಿ ವ್ಯಾಪಾರ ಹಾಗೂ ಟಿಂಬರ್ ವ್ಯಾಪಾರ ಮಾಡುತ್ತಿದ್ದರು. ತಮ್ಮ ಆಲ್ಟೋ ಕಾರಿನಲ್ಲಿ ಚಿಕ್ಕಮಗಳೂರಿನಿಂದ ಆಲ್ದೂರಿಗೆ ಬರುವ ಮಾರ್ಗಮಧ್ಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ವೇಳೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಈ ವೇಳೆಗಾಗಲೇ ರಘು ಕಾರಿನಲ್ಲಿಯೇ ಸಜೀವ ದಹನವಾಗಿದ್ದರು. ಘಟನಾ ಸ್ಥಳಕ್ಕೆ ಆಲ್ದೂರು ಪಿಎಸ್ಐ ಶಿವರುದ್ರಮ್ಮ ಹಾಗು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.