ಬ್ರಹ್ಮಾವರ : ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಹಾಗೂ ದಾಸ್ತಾನು ಇರಿಸಿದ್ದ ರೈಸ್ ಮಿಲ್ ಮೇಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ವೇಳೆಯಲ್ಲಿ ಬರೋಬ್ಬರಿ 600 ಕ್ವಿಂಟಾಲ್ ಅನಭಾಗ್ಯದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಲ್ಮರ್ಗಿ ಎಂಬಲ್ಲಿನ ರೈಸ್ ಮಿಲ್ ನಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಲಾಗಿತ್ತು.

ಅಲ್ಲದೇ ಕಳೆದ ಒಂದೂವರೆ ತಿಂಗಳಿನಿಂದಲೂ ಸತತವಾಗಿ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿಯ ಮೇರೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ.

ದಾಳಿಯ ವೇಳೆಯಲ್ಲಿ 16.5 ಲಕ್ಷ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, 6 ಲಾರಿ, ಎರಡು ಟೆಂಪೋ, ಎರಡು ವಾಹನ ಹಾಗೂ 3 ಲಾರಿ ಚಾಲಕರು ಮತ್ತು ಕ್ಲೀನರ್ ನನ್ನು ವಶಕ್ಕೆ ಪಡೆಯಲಾಗಿದೆ.

ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿಯೂ ಅನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಜಾಲವನ್ನು ಪತ್ತೆ ಹಚ್ಚಲಾಗಿದೆ. ಕುಂದಾಪುರದಲ್ಲಿಯೂ ಕಳೆದ ತಿಂಗಳು ಜಾಲ ಪತ್ತೆಯಾಗಿದೆ.

ಅನ್ನಭಾಗ್ಯದ ಅಕ್ಕಿಯನ್ನು ಮಾರಾಟ ಮತ್ತು ಖರೀದಿ ಹಾಗೂ ಅಕ್ರಮವಾಗಿ ದಾಸ್ತಾನು ಇರಿಸಿರುವವರ ಕುರಿತು ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದ್ದಾರೆ.
ದಾಳಿಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಗಜೇಂದ್ರ, ಆಹಾರ ನಿರೀಕ್ಷಕರಾದ ಪಾರ್ವತಿ, ಸುರೇಶ್ ಹಾಗೂ ಪೊಲೀಸರು ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.