ಮಂಗಳೂರು : ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಮದುವೆ ಹಾಲ್ ಮಾಲೀಕರಿಗೆ ಮಂಗಳೂರು ಮಹಾನಗರ ಪಾಲಿಕೆ ಶಾಕ್ ನೀಡಿದೆ.
ನಗರದ ಕಂಕನಾಡಿಯ ವೆಲೆನ್ಸಿಯಾದಲ್ಲಿರುವ ಚರ್ಚ್ ಹಾಲ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕುರಿತು ಸಾರ್ವಜನಿಕ ವಲಯದಿಂದ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪಾಲಿಕೆಯ ಅಧಿಕಾರಿಗಳು 5 ಸಾವಿರ ರೂ. ದಂಡ ಹಾಕಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮದುವೆ, ಸಭೆ ಸಮಾರಂಭಗಳ ಆಯೋಜನೆಗೆ ಮಾರ್ಗಸೂಚಿಯನ್ನು ಹೊರಡಿಸಿದೆ. ಕೇವಲ 150 ಮಂದಿ ಮಾತ್ರವೇ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವನ್ನೂ ಕಲ್ಪಿಸಲಾಗಿತ್ತು. ಆದರೆ ಮಂಗಳೂರು ನಗರದಲ್ಲಿರುವ ದೊಡ್ಡ ಪ್ರಮಾಣದ ಹಾಲ್ ಗಳಲ್ಲಿ ನಿಯಮ ಉಲ್ಲಂಘನೆಯ ಪ್ರಕರಣಗಳು ಕಂಡುಬರುತ್ತಿವೆ. ಹಾಲ್ ಮಾಲೀಕರ ನಿರ್ಲಕ್ಷ್ಯದ ಕುರಿತು ಮನಾಪಾ ಅಧಿಕಾರಿಗಳು ದಂಡ ವಿಧಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟವರಾಗಲೀ, ಮದುವೆ ನಡೆಸುವ ಪಾರ್ಟಿಯಾಗಲೀ ಈ ಬಗ್ಗೆ ಜಾಗ್ರತೆ ವಹಿಸುವುದಿಲ್ಲ. ಕಂಕನಾಡಿಯ ಸಮೃದ್ಧಿ ಹಾಲ್ ನಲ್ಲಿ ಕೂಡ ಇದೇ ರೀತಿಯ ನಿಯಮ ಉಲ್ಲಂಘನೆಯಾಗಿದ್ದರಿಂದ ಅಧಿಕಾರಿಗಳು ದಂಡ ವಿಧಿಸಿದ್ದಾರೆ.