ಭಟ್ಕಳ : ನಾಡದೋಣಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆಯಲ್ಲಿ ಮೀನುಗಾರರ ಬಲೆಗೆ ದೈತ್ಯಾಕಾರದ ಮೊಸಳೆಯೊಂದು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅಳ್ವೆಕೋಡಿಯಲ್ಲಿ ನಡೆದಿದೆ.

ಕರಾವಳಿಯ ಸಮುದ್ರದಲ್ಲಿ ಮೊಸಳೆಗಳು ಕಾಣಸಿಗುವುದೇ ತೀರಾ ಅಪರೂಪ. ಆದರೆ ಸಾಂಪ್ರದಾಯಿಕ ಕೈರಂಪಣಿ ಮೀನುಗಾರರ ಬಲೆಗೆ ಮೀನುಗಳ ಜೊತೆಗೆ ಮೊಸಳೆ ಬಿದ್ದಿರುವುದು ಮೀನುಗಾರರಲ್ಲಿ ಆಶ್ಚರ್ಯ ಮೂಡಿಸಿತ್ತು.
ಬಲೆಯಲ್ಲಿ ಮೀನುಗಳ ಜೊತೆಯಲ್ಲಿ ಮೊಸಳೆ ಇರುವುದನ್ನು ಕಂಡು ಜನರು ಆತಂಕಕ್ಕೆ ಒಳಗಾಗಿದ್ದರು. ಬಲೆಗೆ ಮೊಸಳೆ ಬಿದ್ದಿರುವ ಸುದ್ದಿ ಕೇಳುತ್ತಿದ್ದಂತೆಯೇ ಸಾಕಷ್ಟು ಮಂದಿ ಸಮುದ್ರ ಕಿನಾರೆಗೆ ಓಡೋಡಿ ಬಂದಿದ್ದರು.

ಈ ಬಾರಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಹೊಳೆಗಳಲ್ಲಿರುವ ಮೊಸಳೆ ಸಮುದ್ರ ಪಾಲಾಗಿರಬೇಕು ಎಂದು ಅಂದಾಜಿಸಲಾಗುತ್ತಿದೆ.
ಆದರೆ ಸಮುದ್ರದಲ್ಲಿ ಮೊಸಳೆಯೊಂದು ಕಾಣಿಸಿಕೊಳ್ಳುವ ಮೂಲಕ ಕರಾವಳಿ ಭಾಗದ ಜನರ ಕೂತುಹಲಕ್ಕೆ ಕಾರಣವಾಗಿದೆ. ಅಂತಿಮವಾಗಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆಯನ್ನು ಹಿಡಿದು ಹೊಳೆಗೆ ಬಿಟ್ಟಿದ್ದಾರೆ.