ಮಂಗಳೂರು : ಕಳೆದ 12 ದಿನಗಳಿಂದಲೂ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗದೆ. ಕೊರೊನಾ ಮುಕ್ತ ಜಿಲ್ಲೆಯಾಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಕರಾವಳಿಗರಿಗೆ ಇದೀಗ ಆತಂಕ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಯುವಕನೋರ್ವನಿಗೆ ಕೋವಿಡ್-19 ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ.

ಕೆಲಸದ ಹಿನ್ನೆಲೆಯಲ್ಲಿ ವ್ಯಕ್ತಿ ದೆಹಲಿಗೆ ತೆರಳಿದ್ದು, ಮಾರ್ಚ್ 20ರಂದು ಯುವಕ ನಿಜಾಮುದ್ದೀನ್ ರೈಲಿನಲ್ಲಿ ದೆಹಲಿಯಿಂದ ಹೊರಟು ಮಂಗಳೂರು ತಲುಪಿದ್ದ. ಆದರೆ ಯುವಕ ದೆಹಲಿಗೆ ತೆರಳಿದ್ದ ವಿಚಾರವನ್ನು ಮುಚ್ಚಿಟ್ಟಿದ್ದ.

ನಂತರ ಮೊಬೈಲ್ ಟವರ್ ಆಧಾರದ ಮೇಲೆ ವ್ಯಕ್ತಿಯನ್ನು ಪತ್ತೆ ಹಚ್ಚಿ ಮಾರ್ಚ್ 23ರಿಂದಲೇ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇದೀಗ ಯುವಕನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿಯಲ್ಲಿ ಯುವಕನಿಗೆ ಕೋವಿಡ್ -19 ಸೋಂಕು ಇರುವುದು ದೃಢಪಟ್ಟಿದೆ.

ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಮತ್ತೆ ಆತಂಕ ಶುರುವಾಗಿದೆ. ಜಿಲ್ಲಾಡಳಿತ ಯುವಕನನ್ನು ಕ್ವಾರಂಟೈನ್ ಮಾಡುವಾಗಲೇ ಉಪ್ಪಿನಂಗಡಿಯ ಸುತ್ತಮುತ್ತಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ.