ಚಿಕ್ಕಮಗಳೂರು : 17 ವರ್ಷದ ಬಾಲಕನೋರ್ವನನ್ನು 20 ವರ್ಷದ ಯುವತಿಯೋರ್ವಳು ವಿವಾಹವಾಗಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ. ಅಪ್ತಾಪ್ತ ಬಾಲಕ ವಿವಾಹ ಹಿನ್ನೆಲೆ ಯುವತಿಯ ವಿರುದ್ದ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬ್ರಹ್ಮ ಸಮುದ್ರದ ನಿವಾಸಿಯಾಗಿರುವ ಬಾಲಕನಿಗೆ ಬೆಂಗಳೂರು ಮೂಲದ ಯುವತಿಯ ಜೊತೆಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಮದುವೆ ಯಾಗುವುದಕ್ಕೆ ನಿರ್ಧಾರ ಮಾಡಿದ್ದಾರೆ.
ಇಬ್ಬರೂ ಮನೆಯವರಿಗೂ ವಿಷಯವನ್ನು ತಿಳಿಸಿದ್ದಾರೆ. ಮನೆ ಯವರೂ ಕೂಡ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಎರಡೂ ಕಡೆಯವರು ಸೇರಿಕೊಂಡು ಕಡೂರು ತಾಲೂಕಿನ ಬ್ರಹ್ಮಸಮುದ್ರದ ಬಾಲಕನ ಮನೆಯಲ್ಲಿ ಜೂ.23ರಂದು ಮದುವೆ ಮಾಡಿದ್ದಾರೆ. ಇದೀಗ ವಿವಾಹ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಅಪ್ರಾಪ್ತ ಬಾಲಕನನ್ನು ವಿವಾಹ ಆಗಿರುವ ಯುವತಿ ವಿರುದ್ಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ, ಕೋವಿಡ್ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಮಕ್ಕಳ ಸಹಾಯ ವಾಣಿಯ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.