Mysore Dasara; ಮೈಸೂರಿನಲ್ಲಿ ನಾಡಹಬ್ಬ ದಸರಾ ಆನೆಗಳ ಮುಂದೆ ಫೋಟೋ ಶೂಟ್ ಮತ್ತು ರೀಲ್ಸ್ ಮಾಡದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ದೇಶನ ನೀಡಿದ್ದಾರೆ.ಈ ಕುರಿತಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಟಿಪ್ಪಣಿ ಬರೆದಿರುವ ಸಚಿವ ಈಶ್ವರ್ ಖಂಡ್ರೆ (EShwar Khandre) ಇನ್ನು ಮುಂದೆ ಯಾವುದೇ ರೀತಿಯ ಪೋಟೋ ಮತ್ತು ರೀಲ್ಸ್ ಗೆ ಅವಕಾಶ ಕಲ್ಪಿಸದಂತೆ ಸೂಚನೆ ನೀಡಿದ್ದಾರೆ.

ಅರಣ್ಯ ಅಧಿಕಾರಿಗಳೇ ಸಾರ್ವಜನಿಕರಿಗೆ ಫೋಟೋ ಶೂಟ್, ರೀಲ್ಸ್ ಗೆ ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪ ಇದ್ದು, ಇದರಿಂದಾಗಿ ಆನೆಗಳು ವಿಚಲಿತವಾಗಿ ಅನುಚಿತವಾಗಿ ವರ್ತಿಸುತ್ತಿವೆ, ಕಳೆದ ವಾರ ನಡೆದ ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಕಾದಾಟ ಆಗಲು ಇದೂ ಒಂದು ಕಾರಣವಾಗಿದೆ ಎಂದೂ ಮಾಧ್ಯಮ ವರದಿ ಆಗಿದೆ ಎಂದು ಸಚಿವರು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ, ಕೆಲವರು ಆನೆಯ ದಂತವನ್ನು ಹಿಡಿದು, ಸೊಂಡಿಲು ತಬ್ಬಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಿಬಿರದಿಂದ ದಸರಾ ಹಬ್ಬಕ್ಕಾಗಿ ಕರೆತಂದ ಅನೆಗಳನ್ನು ಸುರಕ್ಷಿತವಾಗಿ ಶಿಬಿರಕ್ಕೆ ಬಿಡಬೇಕು ಮತ್ತು ಅಲ್ಲಿಯ ತನಕ ಯಾವುದೇ ಅನಾಹುತ ಆಗದಂತೆ ಇಲಾಖೆ ಎಚ್ಚರ ವಹಿಸಬೇಕು ಎಂದು ಸಚಿವ ಖಂಡ್ರೆ ಸೂಚನೆ ನೀಡಿದ್ದಾರೆ.

ಈ ಮಧ್ಯೆ ಮೈಸೂರು ಅರಮನೆ ಆವರಣದಲ್ಲಿ ಆನೆಗಳ ಎದುರು ಪೋಟೋ, ಸೆಲ್ಫಿ ತೆಗೆದುಕೊಳ್ಳುವವರಿಗೆ ಕಡಿವಾಣ ಹಾಕಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿರುವ ಯದುವೀರ ಒಡೆಯರ್, ಕಂಜನ್ ಮತ್ತು ಧನಂಜಯ ಆನೆಗಳ ಗಲಾಟೆ ತಮ್ಮ ಗಮನಕ್ಕೆ ಬಂದಿದ್ದು ಭದ್ರತೆಯನ್ನು ಇನ್ನಷ್ಟು ಹೆಚ್ಚಳ ಮಾಡಬೇಕು ಎಂದಿದ್ದಾರೆ. ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಆಹಾರದ ವಿಚಾರವಾಗಿ ಗಲಾಟೆಯಾಗಿ ಅರಮನೆ ಆವರಣದ ಶಿಬಿರದಿಂದ ಎರಡೂ ಆನೆಗಳು ರಾತ್ರಿ ವೇಳೆ ಏಕಾಏಕಿ ಮೈಸೂರಿನ ಬೀದಿಗಳಲ್ಲಿ ಓಡಾಡಿ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಈ ನಡುವೆ ಮೈಸೂರು ದಸರಾ 2024ರ ವೇಳೆ ಅರಮನೆಯ ಖಾಸಗಿ ದರ್ಬಾರ್ ಗೆ ಪಟ್ಟದ ಆನೆ ಮತ್ತು ನಿಶಾನೆ ಆನೆಗಳನ್ನು ಅಂತಿಮಗೊಳಿಸಲಾಗಿದೆ.ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆನೆಗಳನ್ನು ಅಂತಿಮ ಮಾಡಿದ್ದು, ಪಟ್ಟದ ಆನೆಯಾಗಿ ಕಂಜನ್ ಮತ್ತು ನಿಶಾನೆ ಆನೆಯಾಗಿ ಭೀಮ ಆಯ್ಕೆಯಾಗಿವೆ.