ಉಡುಪಿ : ದುಬೈನಿಂದ ಬಂದಿದ್ದ ಗರ್ಭಿಣಿಗೆ ಕ್ವಾರಂಟೈನ್ ಗೆ ಒಳಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ವಿರುದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ದೂರುಕೊಟ್ಟಿದ್ದಾರೆ.

ಕಳೆದ 15 ದಿನಗಳ ಹಿಂದೆ ಗರ್ಭಿಣಿ ಮಹಿಳೆ ದುಬೈನಿಂದ ಉಡುಪಿಗೆ ಆಗಮಿಸಿದ್ದರು. ಜಿಲ್ಲಾಡಳಿತ ಗರ್ಭಿಣಿ ಮಹಿಳೆಯನ್ನು ಹೋಟೆಲ್ ನಲ್ಲಿ ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ. ಕ್ವಾರಂಟೈನ್ ಅವಧಿ 15 ದಿನ ಮುಗಿದರೂ ಕೂಡ ಮಹಿಳೆಯನ್ನು ಮನೆಗೆ ಕಳುಹಿಸಿಕೊಟ್ಟಿರಲಿಲ್ಲ. ಅಲ್ಲದೇ ಮನೆಯಿಂದ ಆಹಾರ ವಸ್ತುಗಳನ್ನು ನೀಡಲು ಕೂಡ ಜಿಲ್ಲಾಡಳಿತ ಅವಕಾಶವನ್ನು ಕಲ್ಪಿಸಿಲ್ಲ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ಪ್ರಮೋದ್ ಮಧ್ವರಾಜ್ ಅವರು ಟ್ವಿಟರ್ ಮೂಲಕ ಮುಖ್ಯಮಂತ್ರಿಗಳಿಗೆ ದೂರುಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವಿದೇಶದಿಂದ ಬಂದಿದ್ದವರಿಗೆ ಕ್ವಾರಂಟೈನ್ ವಿಧಿಸುವ ಕುರಿತು ರಾಜ್ಯ ಆರೋಗ್ಯ ಇಲಾಖೆ ವಿಧಿಸಿರುವ ಮಾರ್ಗ ಸೂಚಿಗಳನ್ನು ಕೂಡ ಟ್ಯಾಗ್ ಮಾಡಿದ್ದಾರೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಟ್ವೀಟ್ ಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿಗಳು ಟ್ವೀಟ್ ಮಾಡಿದ್ದು, ಬೇಜವಾಬ್ದಾರಿಯ ಪ್ರಶ್ನೆಯೇ ಇಲ್ಲಾ, ಜಿಲ್ಲೆಗೆ 8,000 ಮಂದಿ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಬಂದಿದ್ದಾರೆ. ಅವರೆಲ್ಲರ ಟೆಸ್ಟ್ ಮಾಡಿಸಿ ಬಿಡಬೇಕಾಗುತ್ತದೆ. ಆದ್ದರಿಂದ ದಯವಿಟ್ಟು ಸಹಕರಿಸಬೇಕು. ಅಲ್ಲದೇ ಗರ್ಭಿಣಿ ಮಹಿಳೆ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಅವರನ್ನು 14 ದಿನಗಳ ನಂತರ ಬಿಡಬೇಕಾಗುತ್ತದೆ ಎಂದಿದ್ದಾರೆ.

8,000 ಮಂದಿಯ ಬಗ್ಗೆ ನಾನು ಎಲ್ಲಿಯೂ ಹೇಳಿಲ್ಲ. ಬದಲಾಗಿ ಕೇವಲ ಗರ್ಭಿಣಿ ಮಹಿಳೆಯ ಕುರಿತು ಮಾತನಾಡಿದ್ದೇನೆ. ಗರ್ಭಿಣಿ ಮಹಿಳೆಯನ್ನು ಕ್ವಾರಂಟೈನ್ ಗೆ ಒಳಪಡಿಸುವ ಕುರಿತು ಸರಕಾರ ಎಲ್ಲಿ ಹೇಳಿದೆ ಎಂದು ಪ್ರಮೋದ್ ಮಧ್ವರಾಜ್ ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.