Udupi Heavy rain Flood : ಉಡುಪಿ : ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಉಡುಪಿ ಜಿಲ್ಲೆಯ ಜನರನ್ನು ತತ್ತರಿಸಿ ಹೋಗುವಂತೆ ಮಾಡಿದೆ. ಇಂದ್ರಾಣಿ ನದಿ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಉಡುಪಿ ನಗರದ ಬಹುತೇಕ ಪ್ರದೇಶಗಳು ಜಲಾವೃತವಾಗಿದೆ. ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿದೆ.

ಉಡುಪಿ ನಗರದಲ್ಲಿಯೇ ಮಳೆ ನಿನ್ನೆ ರಾತ್ರಿಯಿಂದಲೂ ಆರ್ಭಟಿಸುತ್ತಿದೆ. ಪ್ರಮುಖವಾಗಿ ಕಲ್ಸಂಕ ಬೈಲಕೆರೆ, ಕರಂಬಳ್ಳಿ, ಶ್ರೀ ಕೃಷ್ಣಮಠದ ಪಾರ್ಕಿಂಗ್, ಮಣಿಪಾಲ, ನಿಟ್ಟೂರು, ಮಲ್ಪೆ, ಪಾಡಿಗಾರು, ಗುಂಡಿಬೈಲು ಸೇರಿದಂತೆ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ. ಜನರು ಮನೆಯಿಂದ ಹೊರಗೆ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ನೆರೆ ಹಾವಳಿ ಸಿಲುಕಿರುವ ಮನೆಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕಾರ್ಯ ನಡೆಯುತ್ತಿದೆ.
ಬ್ರಹ್ಮಾವರ ತಾಲೂಕಿನ ಬ್ರಹ್ಮಾವರ, ಉಪ್ಪಿನಕೋಟೆ, ಬಾರಕೂರು, ಕೋಟ, ಸಾಲಿಗ್ರಾಮ, ಸಾಯಿಬ್ರಕಟ್ಟೆ, ಮಂದಾರ್ತಿ, ಕೊಕ್ಕರ್ಣೆ ಸೇರಿದಂತೆ ಹಲವು ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇನ್ನು ಕುಂದಾಪುರ ತಾಲೂಕಿನ ಹಲವು ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ವಾರಾಹಿ, ಸೀತಾ, ಸ್ವರ್ಣ ನದಿಯಲ್ಲಿಯೂ ನೀರಿನ ಮಟ್ಟ ಹೆಚ್ಚಳವಾಗಿದೆ.
ಇದನ್ನೂ ಓದಿ : ಮುಂದುವರಿದ ಮಳೆಯ ಆರ್ಭಟ, ಜುಲೈ 8 ರಂದು ಮಂಗಳೂರಿನ ಶಾಲೆ, ಕಾಲೇಜುಗಳಿಗೆ ರಜೆ
ರಜೆ ನೀಡದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ನೆರೆ ಹಾವಳಿಯಿಂದಾಗಿ ಜನರು ತತ್ತರಿಸಿದ್ದಾರೆ. ಬೆಳಗಿನಿಂದಲೇ ಧಾರಾಕಾರ ಮಳೆಯ ನಡುವಲ್ಲೇ ವಿದ್ಯಾರ್ಥಿಗಳು ಶಾಲೆಗೆ ತೆರಳಿದ್ದಾರೆ. ತಗ್ಗು ಪ್ರದೇಶದಲ್ಲಿನ ವಿದ್ಯಾರ್ಥಿಗಳು ನೆರೆ ದಾಟಿಕೊಂಡೇ ಶಾಲೆಗೆ ತೆರಳಿದ್ದಾರೆ.

ನಿನ್ನೆಯಿಂದಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆ ಭಾರೀ ಮಳೆಯ ಕುರಿತು ಮುನ್ಸೂಚನೆ ನೀಡಿದ್ದರೂ ಕೂಡ ಉಡುಪಿ ಜಿಲ್ಲಾಡಳಿತ ರಜೆ ಘೋಷಣೆ ಮಾಡಿರಲಿಲ್ಲ. ಇದರಿಂದಾಗಿ ಜಿಲ್ಲೆಯ ಜನತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯಲ್ಲಿ ಸಿಗಲಿದೆ 4000 ರೂ.: ತಪ್ಪದೇ ಈ ಕೆಲಸ ಮಾಡಿ ಮುಗಿಸಿ
ಉಡುಪಿ ಜಿಲ್ಲಾಧಿಕಾರಿಗಳು ರಜೆ ನೀಡುವ ಜವಾಬ್ದಾರಿಯನ್ನು ತಹಶೀಲ್ದಾರ್ ಅವರಿಗೆ ವಹಿಸಿದ್ದರು. ಆದರೆ ಪರಿಸ್ಥಿತಿಯನ್ನು ಅವಲೋಕಿಸಿ ರಜೆ ನೀಡುವ ಕಾರ್ಯವನ್ನು ಜಿಲ್ಲಾಡಳಿತ ಮಾಡಿಲ್ಲ ಅನ್ನೋ ಆಕ್ರೋಶವನ್ನು ಜನತೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ತಹಶೀಲ್ದಾರರು, ಬಿಇಒಗಳಿಗೆ ರಜೆ ನೀಡುವ ಅಧಿಕಾರ ನೀಡುವ ಬದಲು ಜಿಲ್ಲಾಧಿಕಾರಿಗಳೇ ಶಾಲಾ ರಜೆಯ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲಿ ಎಂಬ ಆಗ್ರಹ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯಡಿ ಈ ವಾರದಲ್ಲೇ ಎಲ್ಲರ ಖಾತೆಗೂ ಗೃಹಲಕ್ಷ್ಮೀ ಹಣ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಇನ್ನೂ ಎರಡು ದಿನ ಭಾರೀ ಮಳೆ
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ಇಂದೂ ಕೂಡ ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆ ಸುರಿದಿದ್ದರೂ ಕೂಡ, ಹಲವು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
Udupi Heavy rain Flood Indrani River Karnataka Weather Report