ಕೋಟ : ಆಟಿಅಮವಾಸ್ಯೆಯ ದಿನದಂದು ವಿಶ್ವಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಚ್ಲಾಡಿಯ ಸನ್‌ಶೈನ್ ಗೆಳೆಯರ ಬಳಗ ರಿ. ಕ್ರೀಡಾಸಂಘ ಅಚ್ಲಾಡಿ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಕೊರೊನಾ ಸೋಂಕಿನ ನಡುವಲ್ಲೇ ಗ್ರಾಮೀಣ ಸೊಗಡಿನ ವಿವಿಧ ಕ್ರೀಡಾಕೂಟ ಹಾಗೂ ಕುಂದಗನ್ನಡದ ಗಾಧೆ ಮಾತು, ಪದಗಳ ಅರ್ಥ ಹೇಳುವ ಸ್ಪರ್ಧೆಯು ಸನ್‌ಶೈನ್ ಕ್ರೀಡಾಂಗಣದಲ್ಲಿ ಜರಗಿತು.

ಉಡುಪಿ ಜಿಲ್ಲಾ ಮೊಗವೀರ ಯುವಸಂಘಟನೆ ಜಿಲ್ಲಾಧ್ಯಕ್ಷ ಶಿವರಾಮ್ ಕೆ.ಎಂ. ಮಧುವನ ಚೆನ್ನೆಮಣೆ ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕುಂದಾಪ್ರ ಕನ್ನಡ ವಿಶಿಷ್ಠವಾದ ಸಾಂಸ್ಕೃತಿಕ ಹಿನ್ನಲೆಯುಳ್ಳ ಭಾಷೆಯಾಗಿದೆ. ಇಲ್ಲಿನ ಪ್ರತಿಯೊಂದು ಆಚರಣೆ, ನಡಾವಳಿಗಳು ನಮ್ಮ ಬದುಕಿನ ಒಂದು ಅಂಗ. ಇಂತಹ ಕಾರ್ಯಕ್ರಮಗಳ ಮೂಲಕ ಭಾಷೆ ಹಾಗೂ ಬದುಕನ್ನು ಬೆಳೆಸಲು ಸಾಧ್ಯ ಎಂದರು.

ಸಂಘಟನೆ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೊರೊನಾ ಕುರಿತು ಜಾಗೃತಿ ವಹಿಸುವಂತೆ ಮಾಹಿತಿ ನೀಡಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.

ಸಂಘಟನೆಯ ಗೌರವಾಧ್ಯಕ್ಷ ಯೋಗೇಶ್ ಅಚ್ಲಾಡಿ, ಕಾರ್ಯದರ್ಶಿ ಸುಶಾಂತ್ ಶೆಟ್ಟಿ ಅಚ್ಲಾಡಿ, ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಕೆ.ಪಿ., ಪದಾಧಿಕಾರಿಗಳಾದ ಪ್ರವೀಣ್ ಆಚಾರ್ಯ, ಕಿಶನ್ ಶೆಟ್ಟಿ, ಗೋಪಾಲ ಮರಕಾಲ, ಪ್ರಶಾಂತ್ ಆಚಾರ್ಯ, ಉದಯ ನಾಯ್ಕ್, ಸ್ಥಳೀಯರಾದ ಗೋಪಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

