Mysore Dasara; ಮೈಸೂರು: ಈ ಬಾರಿಯ ಮೈಸೂರು ದಸರಾ ಹಬ್ಬದಲ್ಲಿ ಯುವ ದಸರಾಕ್ಕೆ ತಾರೆಯರ ಮೆರುಗು ಇರಲಿದೆ. ಅಕ್ಟೋಬರ್ 6ರಿಂದ ಅಕ್ಟೋಬರ್ 10ರವರೆಗೆ ಯುವ ದಸರಾ ನಡೆಯಲಿದೆ.
ಯುವ ದಸರಾವನ್ನು ಅಕ್ಟೋಬರ್ 6 ರಂದು ಸ್ಯಾಂಡಲ್ ವುಡ್ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಲಿದ್ದಾರೆ. ಈ ಬಾರಿ ಬಾಲಿವುಡ್ ಗಾಯಕರು ಪಾಲ್ಗೊಳ್ಳಲಿದ್ದು, ಸಂಗೀತ ಸುಧೆಯೇ ಮೈಸೂರಿನಲ್ಲಿ ಹರಿಯಲಿದೆ.

ಮೈಸೂರು ಹೊರವಲಯದ ಉತ್ತನಹಳ್ಳಿ ಬಳಿ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ನಗರ ಬಸ್ ನಿಲ್ದಾಣದಿಂದ ಕಾರ್ಯಕ್ರಮದ ಸ್ಥಳಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದ್ದು, ಪಾವತಿ ಮಾಡಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಯುವ ದಸರಾಕ್ಕೆ ಈ ಬಾರಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಗ್ಯಾಲರಿ 1ಗೆ ಎಂಟು ಸಾವಿರ ರೂಪಾಯಿ ದರ ನಿಗದಿಪಡಿಸಲಾಗಿದ್ದರೆ, ಗ್ಯಾಲರಿ 2ಗೆ ಐದು ಸಾವಿರದ ದರ ನಿಗದಿಗೊಳಿಸಲಾಗಿದೆ.ನಾಳೆಯಿಂದ ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ನಡೆಯಲಿದ್ದು, ಟಿಕೆಟ್ ಹೊರತುಪಡಿಸಿ ಉಚಿತ ಪ್ರವೇಶಕ್ಕೂ ಅವಕಾಶ ಒದಗಿಸಲಾಗಿದೆ.

ಅಕ್ಟೋಬರ್ 6ರಂದು ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ರಿಂದ ಸಂಗೀತ ಕಾರ್ಯಕ್ರಮ ನಿಗದಿಯಾಗಿದ್ದು,ಅಕ್ಟೋಬರ್ 7ರಂದು ರವಿ ಬಸ್ರೂರ್ ತಂಡದಿಂದ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 8ರಂದು ಬಾಲಿವುಡ್ ರ‌್ಯಾಪರ್ ಬಾದ್ ಷಾರಿಂದ ಮ್ಯೂಸಿಕಲ್ ನೈಟ್, ಅಕ್ಟೋಬರ್ 9ರಂದು ಬಾಲಿವುಡ್ ಸಂಗೀತ ನಿರ್ದೇಶಕ ಎಂ.ಆರ್. ರೆಹಮಾನ್ ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 10ರಂದು ಹಿರಿಯ ಸಂಗೀತ ನಿರ್ದೇಶಕ ಇಳಯರಾಜರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ಮೈಸೂರು ಅರಮನೆಯಲ್ಲಿ ರಾಜಮನೆತನದವರ ಧಾರ್ಮಿಕ ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ನಿಗದಿತ ದಿನಾಂಕ ಮತ್ತು ಅವಧಿಯಲ್ಲಿ ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೆಪ್ಟೆಂಬರ್ 27ರಂದು ಸಿಂಹಾಸನ ಜೋಡಣೆ ಇರುವ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಅಕ್ಟೋಬರ್ 3ರಂದು ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ಇರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ರವರೆಗೆ, ಅಕ್ಟೋಬರದ 11 ಹಾಗೂ 12ರಂದು ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಎರಡು ದಿನ ಪ್ರವಾಸಿಗರಿಗೆ ಅರಮನೆಗೆ ಪ್ರವೇಶ ನಿಷೇಧಿಸಿ ಮೈಸೂರು ಅರಮನೆ ಆಡಳಿತ ಪ್ರಕಟಣೆ ಹೊರಡಿಸಿದೆ.