ಬಿ.ಎಸ್.ಯಡಿಯೂರಪ್ಪ ಕರ್ನಾಟಕ ರಾಜ್ಯ ಕಂಡ ಅತ್ಯಂತ ಪ್ರಭಾವಶಾಲಿ ರಾಜಕಾರಣಿ. ನಾಲ್ಕು ಬಾರಿ ಮುಖ್ಯಮಂತ್ರಿಗಾದಿಯಲ್ಲಿ ಕುಳಿತು ದಾಖಲೆ ಬರೆದವರು. ಶೂನ್ಯದಿಂದ ಅಧಿಕಾರದವರೆಗೆ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಆದ್ರೀಗ ಬಿ.ಎಸ್.ಯಡಿಯೂರಪ್ಪ ರಾಜಕೀಯದಿಂದಲೇ ನಿವೃತ್ತರಾಗಲಿದ್ದಾರೆ ಅನ್ನೋ ಚರ್ಚೆ ಬಲವಾಗಿ ಕೇಳಿಬರುತ್ತಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ಫೆಬ್ರವರಿ 27ಕ್ಕೆ 78 ವರ್ಷ ಪೂರೈಸಲಿದ್ದಾರೆ. ಬಿಜೆಪಿ ಹೈಕಮಾಂಡ್ ತಂದಿರೋ ನಿಯಮದ ಪ್ರಕಾರ 70 ವರ್ಷ ದಾಟಿದವರು ರಾಜಕೀಯದಿಂದ ನಿವೃತ್ತಿ ಪಡೆಯಬೇಕು. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪನವರಿಗೆ ಇರುವ ವರ್ಚಸ್ಸು, ಪಕ್ಷದ ಮೇಲಿರುವ ಅವರ ಹಿಡಿತ ಹೈಕಮಾಂಡ್ ಗೂ ಗೊತ್ತಿದೆ. ಹೀಗಾಗಿಯೇ ಹೈಕಮಾಂಡ್ ರೂಪಿಸಿರೋ ನಿಮಯ ಮಾತ್ರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಅನ್ವಯವಾಗಿಲ್ಲ. ಒಂದೊಮ್ಮೆ ವಯಸ್ಸಿನ ನೆಪವೊಡ್ಡಿ ಯಡಿಯೂರಪ್ಪನವರನ್ನು ಮೂಲೆಗೆ ತಳ್ಳಿದ್ರೆ ಬಿಜೆಪಿಗೆ ಯಾವ ಮಟ್ಟಿನ ಹೊಡೆತ ಬೀಳುತ್ತೇ ಅನ್ನೋದ್ರ ಅರಿವು ಅಮಿತ್ ಶಾ ಗೆ ಇದೆ .

ಇತ್ತೀಚಿಗಷ್ಟೇ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನೀಡಿದ ಹೇಳಿಕೆ ಇದೀಗ ಬಿಜೆಪಿ ವಲಯದಲ್ಲಿಯೇ ಬಾರೀ ಸಂಚಲನವನ್ನು ಮೂಡಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಲ್ಲಿ ಇನ್ನೂ ಮೂರು ವರ್ಷಗಳ ಕಾಲ ಕೂರುವುದು ಶತಸಿದ್ದ. ಆದರೆ ಆ ಬಳಿಕ ಯಡಿಯೂರಪ್ಪ ರಾಜಕೀಯದಿಂದ ನಿವೃತ್ತಿಯನ್ನು ಪಡೆದುಕೊಳ್ಳಲಿದ್ದಾರಾ ಅನ್ನೋ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಬಿಜೆಪಿಯನ್ನು ಮರಳಿ ಅಧಿಕಾರದ ಗದ್ದುಗೆಯಲ್ಲಿ ಕೂರಿಸಿರೋದು, ಉಪಚುನಾವಣೆಯಲ್ಲಿ ಅತೃಪ್ತರನ್ನು ಗೆಲ್ಲಿಸಿದ ಪರಿ ಬಿಜೆಪಿಗರಿಗೆ ಅರಿವಿದೆ. ಹೀಗಾಗಿ ಇದೀಗ ಯಡಿಯೂರಪ್ಪ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಅಂದ್ರೂ ಹೈಕಮಾಂಡ್ ಒಪ್ಪೋದಕ್ಕೆ ಸಾಧ್ಯವೇ ಇಲ್ಲ.

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸೀಟುಗಳನ್ನು ಗೆಲ್ಲಿಸಿ ಮತ್ತೆ ಅಧಿಕಾರಕ್ಕೆ ತರುವ ಗುರಿಯನ್ನು ಹೊಂದಿದ್ದೇನೆ. ಆದರೆ ರಾಜಕೀಯದಲ್ಲಿ ನಿವೃತ್ತಿ ಅನ್ನೋದಿಲ್ಲ ಅನ್ನೋ ಮಾತನ್ನು ಹೇಳಿದ್ದರು. ಯಡಿಯೂರಪ್ಪ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿರೋ ಹೇಳಿಕೆಗಳನ್ನು ನೋಡಿದ್ರೆ ಯಡಿಯೂರಪ್ಪ ಮುಂದಿನ ಚುನಾವಣೆಯ ಹೊತ್ತಿಗೆ ಸಕ್ರೀಯ ರಾಜಕಾರಣದಿಂದ ದೂರವಾಗಿ ಪಕ್ಷ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾರೆ ಅನ್ನೋ ಅನುಮಾನ ಬಲಗೊಳ್ಳುವಂತೆ ಮಾಡುತ್ತಿದೆ. ಆದರೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಗೌರವಯುತವಾಗಿಯೇ ನಡೆಸಿಕೊಂಡು ತೆರೆಮರೆಗೆ ಸರಿಸಲು ಚಿಂತನೆ ನಡೆಸುತ್ತಿರೋದು ಗುಟ್ಟಾಗಿ ಉಳಿದಿಲ್ಲ. ಆದರೆ ಯಡಿಯೂರಪ್ಪ ಅವರು ನಿವೃತ್ತರಾದ್ರೆ ಅವರ ಬೆಂಬಲಿಗರು, ಅಭಿಮಾನಿಗಳು ಅಸಮಾಧಾನವಾಗದಂತೆ ಎಚ್ಚರಿಕೆ ಹೆಜ್ಜೆ ಇಡಲು ಹೈಕಮಾಂಡ್ ಚಿಂತನೆ ನಡೆಸುತ್ತಿದೆ.
ಯಡಿಯೂರಪ್ಪನವರಿಗೂ ರಾಜಕಾರಣ ಸಾಕು ಸಾಕಾಗಿ ಹೋಗಿದೆಯಾ ಅನ್ನೋದು ಗೊತ್ತಿಲ್ಲ. ಈ ಬಾರಿ ಮುಖ್ಯಮಂತ್ರಿ ಹುದ್ದೆಗೆ ಏರುವಾಗ ಹೈಕಮಾಂಡ್ ನಡೆಸಿಕೊಂಡ ರೀತಿಯನ್ನು ನೋಡಿರೋ ಯಡಿಯೂರಪ್ಪ, ಪಕ್ಷ ನಿವೃತ್ತಿಯಾಗಲು ಸೂಚಿಸುವುದಕ್ಕೆ ಮೊದಲೇ, ನಿರ್ಲಕ್ಷ,ಕಡೆಗಣನೆ ಮಾಡಲು ಆರಂಭಿಸುವ ಮುನ್ನವೇ ಖುದ್ದಾಗಿ ನಿವೃತ್ತಿ ಪಡೆಯುವ ಲೆಕ್ಕಾಚಾರದಲ್ಲಿದ್ದಾ ಬಿಎಸ್ ವೈ ಅನುಮಾನವೂ ಕಾಡುತ್ತಿದೆ. ಕೈಕೊಡುತ್ತಿರುವ ಆರೋಗ್ಯ, ವಯಸ್ಸಿನ ಕಾರಣವನ್ನು ಮುಂದಿಟ್ಟು ಮುಂದಿನ ದಿನಗಳಲ್ಲಿ ತಮ್ಮ ಪುತ್ರರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ, ಗೌರವ ಪಡೆಯುವ ಲೆಕ್ಕಾಚಾರದೊಂದಿಗೆ ಬಿಎಸ್ ವೈ ಸಕ್ರೀಯ ರಾಜಕಾರಣದಿಂದ ದೂರವಾಗುತ್ತಾರೆ ಅನ್ನೋ ಮಾತು ಕೂಡ ಇದೆ.

ಯಡಿಯೂರಪ್ಪ ಮಾತ್ರವಲ್ಲದೇ ರಾಜ್ಯ ಹಲವು ನಾಯಕರು ಕೂಡ ನಿವೃತ್ತಿಯ ಮಾತನಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರು ಕೂಡ ಹಲವು ಬಾರಿ ಕೊನೆಯ ಚುನಾವಣೆ ಅಂತಾ ಪುನರುಚ್ಚರಿಸಿದ್ದಾರೆ. ಆದರೆ ಯಡಿಯೂರಪ್ಪ ಹಾಗಲ್ಲ. ಯಾವುದ ನಿರ್ಧಾರವನ್ನು ಕೈಗೊಳ್ಳುವಾಗ ಹತ್ತು ಬಾರಿ ಯೋಚನೆ ಮಾಡ್ತಾರೆ. ಹೀಗಾಗಿ ಯಡಿಯೂರಪ್ಪ ಬಾಯಲ್ಲಿ ಬಂದಿರುವ ಮಾತನ್ನು ಕೇಳಿದ್ರೆ ಯಡಿಯೂರಪ್ಪ ನಿವೃತ್ತಿಯಾಗೋದು ಬಹುತೇಕ ಪಕ್ಕಾ ಅನ್ನುತ್ತಿದೆ ಅವರ ಆಪ್ತವಲಯ.

ಈ ಹಿನ್ನೆಲೆಯಲ್ಲಿಯೇ ಹೈಕಮಾಂಡ್ ಪರ್ಯಾಯ ನಾಯಕರನ್ನು ಮುಂಚೂಣಿಗೆ ತರುವ ಕಾಯಕವನ್ನು ಮಾಡುತ್ತಿದೆ. ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆಯೇ ಅಚ್ಚರಿಯೆಂಬಂತೆ ಉಪಮುಖ್ಯಮಂತ್ರಿ ಹುದ್ದೆಗೆ ಮೂವರನ್ನು ಕೂರಿಸಿದೆ. ಮಾತ್ರವಲ್ಲ ಹಿರಿಯ ನಾಯಕರಿಗೆ ಸಚಿವ ಸ್ಥಾನದ ಜೊತೆಗೆ ಪಕ್ಷ ಸಂಘಟನೆಯ ಕಾರ್ಯವನ್ನೂ ಮಾಡುವಂತೆ ಕಟ್ಟಪ್ಪಣೆಯನ್ನು ಹೊರಡಿಸಿದೆ. ಬಿಜೆಪಿ ಮುಂದೆ ಯಾರೇ ನಾಯಕತ್ವವನ್ನು ವಹಿಸಿಕೊಂಡ್ರೂ ಕೂಡ ಯಡಿಯೂರಪ್ಪನವರಂತೆ ಪಕ್ಷ ಸಂಘಟನೆ ಮಾಡ್ತಾರೆ ಅಂತಾ ಹೇಳೋದಕ್ಕೆ ಸಾಧ್ಯವಿಲ್ಲ. ಆದ್ರೆ ಬಿಜೆಪಿ ಹೈಕಮಾಂಡ್ ಮಾತ್ರ ಪಕ್ಷದಲ್ಲಿರೋ ಯುವ ಮುಖಂಡರನ್ನು ಮುನ್ನಲೆಗೆ ತರೋ ಪ್ರಯತ್ನವನ್ನಂತೂ ಮಾಡುತ್ತಿದೆ.

ರಾಜಕೀಯ ನಿವೃತ್ತಿಗೆ ಇನ್ನೂ ಮೂರು ವರ್ಷಗಳು ಬಾಕಿ ಉಳಿದಿರುವಾಗಲೇ ಪರ್ಯಾಯ ನಾಯಕನ ಹುಡುಕಾಟಕ್ಕೆ ಬಿಜೆಪಿ ಮುಂದಾಗಿದೆ. ಮಾತ್ರವಲ್ಲ ಯಡಿಯೂರಪ್ಪ ನಿವೃತ್ತಿಯ ಬಗ್ಗೆ ಚರ್ಚೆಯೂ ನಡೆಯಲಾರಂಭಿಸಿದೆ. ಒಂದೊಮ್ಮೆ ಯಡಿಯೂರಪ್ಪನವರ ಷರತ್ತಿಗೆ ಒಳಪಟ್ಟು ಗೌರವಯುತವಾಗಿ ಬಿಎಸ್ವೈಗೆ ನಿವೃತ್ತಿ ಕೊಡಿಸಿದ್ರೆ ಬಿಜೆಪಿಗೆ ಮುಳುವಾಗುತ್ತಾ ಅನ್ನೋ ಲೆಕ್ಕಾಚಾರದಲ್ಲಿದೆ ಬಿಜೆಪಿ ಹೈಕಮಾಂಡ್. ಮಾತ್ರವಲ್ಲ ಮೂರು ವರ್ಷ ಮುನ್ನವೇ ಯಡಿಯೂರಪ್ಪ ರಾಜೀನಾಮೆಯ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿರೋದು ರಾಜ್ಯ ಬಿಜೆಪಿಗೆ ಮುಳುವಾಗುತ್ತೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಒಟ್ಟಿನಲ್ಲಿ ದಕ್ಷಿಣ ಭಾರತದಲ್ಲಿಯೇ ಬಿಜೆಪಿಯ ಧ್ವಜವನ್ನು ಎತ್ತಿ ಹಿಡಿದಿರೋ ಬಿ.ಎಸ್.ಯಡಿಯೂರಪ್ಪನವರ ನಿವೃತ್ತಿ ಕೇವಲ ರಾಜ್ಯದ ಜನತೆಗಷ್ಟೇ ಅಲ್ಲಾ ರಾಷ್ಟ್ರದ ಜನತೆಗೂ ಕುತೂಹಲ ಮೂಡಿಸಿದೆ. ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಮತ್ತೆ ಚುನಾವಣಾ ಕಣಕ್ಕೆ ಇಳಿಯುತ್ತಾರಾ, ಇಲ್ಲಾ ಮುಖ್ಯಮಂತ್ರಿ ಹುದ್ದೆಯಿಂದ ದೂರ ಉಳಿದು ಪಕ್ಷ ಸಂಘಟನೆಗೆ ತನ್ನನ್ನು ತೊಡಗಿಸಿಕೊಳ್ಳುತ್ತಾರಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.
ಸ್ಪೆಷಲ್ ಡೆಸ್ಕ್ News Next ಕನ್ನಡ