ಸರ್ಕಾರಿ ಜಮೀನಿನಲ್ಲಿ ಮನೆಕಟ್ಟಿದವರಿಗೆ ಗುಡ್ ನ್ಯೂಸ್

0

ಬೆಂಗಳೂರು : ಸರ್ಕಾರಿ ಜಮೀನಿನಲ್ಲಿ ಮನೆ ಹಕ್ಕುಪತ್ರವಿಲ್ಲದೇ ಕಂಗಾಲಾಗಿರೋ ಬಡಕುಟುಂಬಗಳಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದೆ. ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿದವರಿಗೆ ಹಕ್ಕುಪತ್ರ ನೀಡಲು ಸರಕಾರ ಮುಂದಾಗಿದೆ. ರಾಜ್ಯದ ಸುಮಾರು 10,000 ಬಡವರು ತಿಂಗಳಾಂತ್ಯಕ್ಕೆ ಅಕ್ರಮ ಮನೆಗಳ ಮಾಲೀಕರಾಗಲಿದ್ದಾರೆ.
ಹೌದು, ರಾಜ್ಯ ಸರಕಾರ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ವಿತರಣೆ ಮಾಡೋ ವಿಚಾರವನ್ನು ಕಂದಾಯ ಸಚಿವ ಆರ್.ಅಶೋಕ್ ಖಚಿತ ಪಡಿಸಿದ್ದಾರೆ. ವಿಧಾನಸೌದದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಗಳನ್ನು ಸಕ್ರಮಗೊಳಿಸಲಾಗುವುದು. ಜನವರಿ 28ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರೋ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಕ್ಕುಪತ್ರಗಳನ್ನು ವಿತರಣೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಯೋಜನೆ 01-01-2012ಕ್ಕೆ ಮೊದಲು ಮನೆ ಕಟ್ಟಿದವರಿಗೆ ಮಾತ್ರ ಅನ್ವಯವಾಗಲಿದೆ. ಅಲ್ಲದೇ ವಾರ್ಷಿಕ ಆದಾಯವನ್ನು ಪರಿಗಣಿಸಿ ಬಡವರೆಂದು ಗುರುತಿಸಿ ರಾಜ್ಯಾದ್ಯಂತ ಬಡವರಿಗೆ ಅಕ್ರಮ ಸಕ್ರಯ ಯೋಜನೆಯಡಿ 94 ಸಿ ಮತ್ತು 94 ಸಿಸಿ ಕಾಯ್ದೆಯಡಿ ಬಡವರಿಗೆ ಹಕ್ಕು ಪತ್ರ ನೀಡುತ್ತೇವೆ ಎಂದಿದ್ದಾರೆ.
ರಾಜ್ಯಾದ್ಯಂತ ಅಕ್ರಮ ಸಕ್ರಮ ಯೋಜನೆಯಡಿ 2,53,000 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 60,061 ಅರ್ಜಿಗಳಿಗೆ ಮಾತ್ರ ಮಂಜೂರಾತಿ ದೊರಕಿದೆ. ಉಳಿದ 1,47,456 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅಲ್ಲದೇ 45,456 ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುತ್ತದೆ. ಬೆಂಗಳೂರು ಮಾತ್ರವಲ್ಲದೇ ಜನವರಿ 31ರಂದು ಮಂಗಳೂರು, ನಂತರ ಬೀದರ್ ನಲ್ಲೂ ಹಕ್ಕುಪತ್ರ ವಿತರಿಸಲಾಗುತ್ತಿದೆ. ಇನ್ನು 20×30,30×40ಅಳತೆಯಲ್ಲಿ ಕಟ್ಟಿರುವ ಮನೆಗಳ ಮಾಲೀಕರಿಗೆ ಮಾತ್ರ ಕ್ರಯಪತ್ರ ಮಾಡಿಕೊಡಲಾಗುತ್ತದೆ. 2030 ಅಳತೆಯ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್ ಸಿ, ಎಸ್ ಟಿ ವರ್ಗದವರು 2,500 ರೂ. ಹಾಗೂ ಸಾಮಾನ್ಯ ವರ್ಗದವರು 5 ಸಾವಿರ ರೂ.ಶುಲ್ಕ ಪಾವತಿಸಬೇಕು. 3040 ನಿವೇಶನಗಳ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್ ಸಿ, ಎಸ್ ಟಿ ವರ್ಗದವರು 5,000 ರೂ. ಸಾಮಾನ್ಯ ವರ್ಗದವರು 10,000 ರೂ. ಶುಲ್ಕ ನೀಡಬೇಕಾಗುತ್ತದೆ ಎಂದಿದ್ದಾರೆ.

Leave A Reply

Your email address will not be published.