- ಭಾಗ್ಯ ದಿವಾಣ
ಹ್ಯಾಲೋವೀನ್ ಹಬ್ಬದ ಆಚರಣೆ ಯಾರಿಗೆತಾನೆ ಗೊತ್ತಿಲ್ಲ ಹೇಳಿ. ಈಗಂತೂ ದೇಶ ವಿದೇಶಗಳಲ್ಲಿ ಜಾತ್ಯಾತೀತವಾಗಿ ಅಕ್ಟೋಬರ್ 31 ರಂದು ವಾರ್ಷಿಕ ಹಬ್ಬವಾಗಿ ಹ್ಯಾಲೋವೀನ್ ಹಬ್ಬದ ಆಚರಣೆಯನ್ನು ಮಾಡಾಗುತ್ತಿದೆ. ಮೂಲತಃ ಈ ಹಬ್ಬವು ಸೆಲ್ಟ್ ಜನಗಳ ಸೋಯಿನ್ ಹಬ್ಬವಾಗಿದೆ ಮತ್ತು ಕ್ರಿಶ್ಚಿಯನ್ನರ ಪವಿತ್ರ ದಿನವಾದ ಆಲ್ ಸೇಂಟ್ಸ್ ಇವುಗಳಲ್ಲಿ ತನ್ನ ಬೇರನ್ನು ಹೊಂದಿದೆ.

ಈ ಹಬ್ಬದ ಆಚರಣೆಯು ಬಹಳ ವಿಶೇಷವಾಗಿದ್ದು, ಭಯ ಹುಟ್ಟಿಸುವಂತಹ ವೇಷಭೂಷಣಗಳನ್ನು ಧರಿಸುವುದು, ಪಾರ್ಟಿ ಮಾಡಿ, ಭಯಹುಟ್ಟಿಸುವಂತಹ ಕತೆಗಳನ್ನು ಹೇಳುವುದು. ಒಟ್ಟಿನಲ್ಲಿ ಎಲ್ಲರನ್ನು ಭಯಗೊಳಿಸುವಂತದ್ದು ಅತೀ ಮುಖ್ಯವಾಗಿದೆ.

ಆದರೆ ಈ ಹ್ಯಾಲೋವೀನ್ ಹಬ್ಬದ ವಿಚಾರ ಈಗ ಯಾಕೆ ಬಂದಿರೋದು ಗೊತ್ತಾ..? ಈ ಹಬ್ಬಕ್ಕಿನ್ನು ಉಳಿದಿರುವ ಬೆರಳೆಣಿಕೆಯಷ್ಟು ದಿನಗಳು ಮಾತ್ರ. ಅದಾಗಲೇ ವಿಶ್ವದಾದ್ಯಂತ ಜನ ಸಾಮಾನ್ಯರು ಹಬ್ಬದ ಆಚರಣೆಯ ಸಿದ್ಧತೆಯಲ್ಲಿದ್ದಾರೆ. ತಮ್ಮ ಕೂದಲು, ಮುಖ, ಓವರ್ ಆಲ್ ಅಪಿಯರೆನ್ಸ್ ನಲ್ಲಿ ಬದಲಾವಣೆ ತಂದು ಭಯಗೊಳಿಸುವ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕ್ಯಾಲಿಫೋರ್ನಿ ಯಾ ಮೂಲದ ಮಹಿಳೆಯೊಬ್ಬಳು ಈ ಬಾರಿ ಹ್ಯಾಲೋವೀನ್ ಹಬ್ಬಕ್ಕಾಗಿ ಭರದ ಸಿದ್ಧತೆ ಮಾಡಿಕೊಂಡಿದ್ದು ಎಲ್ಲರ ಗಮನಸೆಳೆದಿದೆ

ಹೌದು, ಕತ್ರೀನಾ ಶಾರ್ಟ್ ಎಂಬ ಪೆಟ್ ಗ್ರೂಮರ್ ಒಬ್ಬಾಕೆ, ತನ್ನ ಬದಲಾಗಿ ತನ್ನ ನೆಚ್ಚಿನ ಶ್ವಾನವನ್ನು ಹಬ್ಬಕ್ಕಾಗಿ ತಯಾರು ಮಾಡಿದ್ದಾಳೆ. ಮುದ್ದಾಗಿದ್ದ ತನ್ನ ಶ್ವಾನವನ್ನು ಸ್ಕೆಲಿಟನ್ ಮಾದರಿಯಲ್ಲಿ ಸಿದ್ದಗೊಳಿಸಿದ್ದಾಳೆ, ಆದರೆ ಇದು ಶ್ವಾನದ ಮೇಲೆ ಬರೀ ಪೈಂಟ್ ಮಾಡಿರೋದು ಅಂದುಕೊಳ್ಳಬೇಡಿ.

ಶ್ವಾನದ ಮೈ ಮೇಲಿನ ರೋಮವನ್ನು ಟ್ರಿಮ್ ಮಾಡಿ, ಅಚ್ಚುಕಟ್ಟಾಗಿ ಸ್ಕೆಲಿಟನ್ ನ ಮಾದರಿಯಲ್ಲಿ ಶೇಪ್ ಕೊಟ್ಟಿದ್ದು, ಎಲ್ಲರನ್ನು ನಿಬ್ಬೆರ ಗಾಗುವಂತೆ ಮಾಡಿದೆ. ಝೀಯೂಸ್ ಝೇಬ್ರಡೂಡಲ್ ಎಂಬ ಹೆಸರಿನ ಈ ಶ್ವಾನದ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಚಿತ್ತ ಇದರತ್ತ ಎಂಬಂತಾಗಿದೆ.

ಶ್ವಾನದ ಹೊಸ ಅವತಾರದ ಬಗ್ಗೆ ಮಾತನಾಡಿರುವ ಶ್ವಾನದ ಮಾಲಕಿ ಕತ್ರೀನಾ, ಈ ರೀತಿಯ ಮೇಕ್ ಓವರ್ ಮಾಡಲು ಕಾರಣ ತಿಳಿಸಿದ್ದಾರೆ. “ಇತ್ತೀಚೆಗೆ ಮಕ್ಕಳೊಂದಿಗೆ ನಾನು ಫ್ರಾಂಕನ್ ವೀನಿಯೆ ಎಂಬ ಆನಿಮೇಟೆಡ್ ಚಿತ್ರವನ್ನು ವೀಕ್ಷಿಸಿದ್ದೆ. ಆ ಬಳಿಕ ನನಗೊಂದು ಹೊಸ ಚಿಂತನೆ ಹುಟ್ಟಿಕೊಂಡಿದ್ದು, ನಿದ್ದೆ ಬಿಟ್ಟು ಸಾಮಾನ್ಯ ಶ್ವಾನವೊಂದರ ಅನಾಟಮಿಯ ಬಗ್ಗೆ ತಿಳಿದುಕೊಂಡೆ.

ನಂತರ ನನ್ನ ಮುದ್ದನ ಶ್ವಾನದ ರೋಮವನ್ನ ಅದರ ಶರೀರದೊಳಗಣ ಸ್ಕೆಲಿಟನ್ ಗೆ ಸೂಕ್ತವನ್ನು ಟ್ರಿಮ್ ಮಾಡಿದ್ದೇನೆ.ಈಗ ನೋಡಿದರೆ ಥೇಟ್ 80ರ ದಶಕದಲ್ಲಿ ತೆರೆಕಂಡ ಕರಾಟೆ ಕಿಡ್ ಚಿತ್ರದಲ್ಲಿ ಶ್ವಾನದ ಸ್ಕೆಲಿಟನ್ ಕಾಸ್ಟ್ಯೂಮ್ ಧರಿಸಿದಂತೆಯೇ ಕಾಣುತ್ತಿದೆ ಎಂದು ಸಂತಸದಿಂದ ಕತ್ರೀನಾ ಹೇಳಿಕೊಂಡಿದ್ದಾರೆ

ಕತ್ರೀನಾ ಸಾಮಾನ್ಯವಾಗಿ ತಾನು ಗ್ರೂಮ್ ಮಾಡಿರುವ ಶ್ವಾನಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾಗಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ ಸ್ಕೆಲಿಟನ್ ಲುಕ್ ನ ಶ್ವಾನದ ಫೋಟೋ ವೈರಲ್ ಆಗಿದ್ದೇ ಈಕೆಯ ಫಾಲೋವರ್ಸ್ ಸಂಖ್ಯೆ ಸದ್ಯ 25,000 ದಾಟಿದೆ ಎಂದು ಖುದ್ದು ಕತ್ರೀನಾ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಹ್ಯಾಲೋವೀನ್ ಹಬ್ಬಕ್ಕಾಗಿ ಜನ ಅದಿನ್ನೆಷ್ಟು ಕ್ರೇಜಿಯಾಗ ಸಿದ್ಧರಾಗ್ತಾರೋ ಗೊತ್ತಿಲ್ಲ.