ಬ್ರಹ್ಮಾವರ : ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಆರಂಭಗೊಂಡಿರೋ ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಕಾಲೇಜು 37ನೇ ವರ್ಷದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಜನವರಿ 31ರಂದು ಕಾಲೇಜಿನ ವಾರ್ಷಿಕೋತ್ಸವ ಹಾಗೂ ಫೆಬ್ರವರಿ 1 ರಂದು ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲ ಸಮಾರಂಭ ನಡೆಯಲಿದೆ.

ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಸಾಧಕರೆನಿಸಿಕೊಂಡಿರೋ ಡಾ. ಸಿ. ಟಿ. ಅಬ್ರಹಾಂ ಅವರ ಅವರಿಂದ ಆರಂಭಗೊಂಡ ವಿದ್ಯಾಸಂಸ್ಥೆ ಇಂದು ಬಡ ಗ್ರಾಮೀಣ ಮಕ್ಕಳ ಪಾಲಿಗೆ ಆಶಾಕಿರಣ. ಶಿಕ್ಷಣವೇ ಗಗನ ಕುಸುಮವಾಗಿದ್ದ ಕಾಲದಲ್ಲಿ ಹುಟ್ಟಿಕೊಂಡ ಕ್ರಾಸ್ ಲ್ಯಾಂಡ್ ಕಾಲೇಜು ಇದೀಗ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೊಂದು. ಆರ್ಥಿಕವಾಗಿ ಹಿಂದುಳಿದಿರೋ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುವುದರ ಜೊತೆಗೆ ಕ್ಯಾಂಪಸ್ ಮೂಲಕ ಉದ್ಯೋಗ ದೊರಕಿಸಿಕೊಡುವ ಕಾರ್ಯವನ್ನೂ ಮಾಡುತ್ತಿದೆ. ಕಳೆದ 36 ವರ್ಷಗಳಿಂದಲೂ ಉತ್ತಮ ಶೈಕ್ಷಣಿಕ ದಾಖಲೆಯನ್ನೂ ಹೊಂದಿದೆ. ಇದುವರೆಗೂ ಆಸುಪಾಸಿನ ಬಡ ವಿದ್ಯಾರ್ಥಿಗಳಲ್ಲದೇ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಕಾಲೇಜು ಒಟ್ಟು 37 ರ್ಯಾಂಕ್ ಗಳನ್ನು ಪಡೆದುಕೊಂಡಿದ್ದು, 13 ಚಿನ್ನದ ಪದಕ ಪಡೆದ ಖ್ಯಾತಿ ವಿದ್ಯಾಸಂಸ್ಥೆಗಿದೆ. ಪ್ರತಿಷ್ಠಿತ ಸುದ್ದಿವಾಹಿನಿ ಇಂಡಿಯಾ ಟುಡೆ ದೇಶದಾದ್ಯಂತ ನಡೆಸಿರೋ ಸಮೀಕ್ಷೆಯ ಪ್ರಕಾರ ಭಾರತದ ಕಲಾ ಕಾಲೇಜುಗಳ ಪೈಕಿ ಕ್ರಾಸ್ ಲ್ಯಾಂಡ್ ಕಾಲೇಜು 82 ನೇ ಶ್ರೇಷ್ಟ ಕಾಲೇಜು ಅನ್ನೋ ಖ್ಯಾತಿಗೆ ಪಾತ್ರವಾಗಿದೆ.

ಪದವಿ ಹಾಗೂ ಪದವಿಪೂರ್ವ ವಿಭಾಗಗಳಲ್ಲಿ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದ್ದು, ಬೆಳಗಿನ ಅವಧಿಯಲ್ಲಿ ಪದವಿ ವಿಭಾಗದಲ್ಲಿ ಬಿ.ಎ, ಬಿ.ಕಾಂ ಸಂಯೋಜನೆಯಲ್ಲಿ ಶಿಕ್ಷಣವನ್ನು ನೀಡುತ್ತಿದ್ರೆ, ಮಧ್ಯಾಹ್ನದ ಅವಧಿಯಲ್ಲಿ ಪದವಿಪೂರ್ವ ವಿಭಾಗಕ್ಕೆ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ಕೇವಲ ಉಡುಪಿ ಜಿಲ್ಲೆ ಮಾತ್ರವಲ್ಲದೇ ಹೊರರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕ್ರಾಸ್ ಲ್ಯಾಂಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಮೂಲಭೂತ ಸೌಕರ್ಯಗಳನ್ನೂ ಒದಗಿಸೋ ಕಾಯಕವನ್ನು ಮಾಡುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸ್ಯಾಮುವೆಲ್ ಕೆ. ಸ್ಯಾಮುವೆಲ್ ತಿಳಿಸಿದ್ದಾರೆ.

ಹಳೆ ವಿದ್ಯಾರ್ಥಿ ಸಂಘಕ್ಕೆ ದಶಮಾನೋತ್ಸವ
ಕಳೆದ 10 ವರ್ಷಗಳ ಹಿಂದೆ ಆರಂಭಗೊಂಡ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಕಾಲೇಜಿನೊಂದಿಗೆ ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡಿದೆ. ಕಾಲೇಜಿನ ಸರ್ವಾಂಗೀಣ ಅಭಿವೃದ್ದಿಗಾಗಿ ಹಳೆವಿದ್ಯಾರ್ಥಿಗಳ ಸಂಘ ಶ್ರಮಿಸುತ್ತಿದ್ದು, ಸುತ್ತಮುತ್ತಲಿನ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ದೊಂದಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆ, ಕಾಲೇಜಿನ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಗುರಿಯನ್ನು ಹೊಂದಲಾಗಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶುಲ್ಕವನ್ನು ನೀಡಿ ಪ್ರೋತ್ಸಾಹಿಸುವ ಕಾರ್ಯವನ್ನೂ ಸಂಘ ಮಾಡುತ್ತಿದ್ದು, ಮುಂದೆಯೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಶುಲ್ಕ ನೀಡುವ ಗುರಿಯನ್ನು ಹಮ್ಮಿಕೊಂಡಿದೆ. ಕಳೆದ ಬಾರಿಯಿಂದ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ವರ್ಷಂಪ್ರತಿ ಫೆಬ್ರವರಿ 1 ರಂದು ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಲು ನಿಶ್ಚಯಿಸಲಾಗಿದೆ. ಸ್ನೇಹ ಸಮ್ಮಿಲನದಲ್ಲಿ ರ್ಯಾಂಕ್ ಗಳಿಸಿರುವ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಲಿರೋ ಬೋಧಕ ಹಾಗೂ ಭೋದಕೇತರ ಸಿಬ್ಬಂಧಿಗಳನ್ನು ಸಮ್ಮಾನಿಸೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಟಪಾಡಿ ಮನವಿ ಮಾಡಿಕೊಂಡಿದ್ದಾರೆ.