ಬೆಂಗಳೂರು : ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮಕ್ಕಳು ಹಾಜರಿಯೊಂದಿಗೆ ಶಾಲೆಗಳು ಪ್ರಾರಂಭವಾಗುವ ವರೆಗೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ರಜೆ ಘೋಷಿಸುವಂತೆ ಮಾಜಿ ಶಿಕ್ಷಣ ಸಚಿವ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಜೂನ್ 8 ರಿಂದ ರಾಜ್ಯದಾದ್ಯಂತ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರು ಕಡ್ಡಾಯವಾಗಿ ಶಾಲೆಗಳಿಗೆ ಹಾಜರಾಗಿ ಶಾಲಾರಂಭದ ಕಾರ್ಯಗಳನ್ನು ಮಾಡಿಕೊಳ್ಳುವಂತೆ ಸೂಚನೆಯನ್ನು ನೀಡಲಾಗಿತ್ತು. ಆದರೆ ಶಾಲಾರಂಭದ ಕಾರ್ಯಗಳು, ಪೂರ್ವ ಸಿದ್ದತೆಗಳು ಸಂಪೂರ್ಣವಾಗಿ ಮುಕ್ತಾಯವಾಗಿದ್ದು, ಪ್ರತೀ ದಿನ ಶಿಕ್ಷಕರು ಕೆಲಸವಿಲ್ಲದೇ ಶಾಲೆಗಳಿಗೆ ಹಾಜರಾಗುತ್ತಿರುವುದು ವಿನಾಕಾರಣ ಎನಿಸುತ್ತಿದೆ.

ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸುವ ಹಿನ್ನೆಲೆಯಲ್ಲಿ ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆ ಜೂನ್ ಅಂತ್ಯದ ವರೆಗೂ ಕಾಲೇಜುಗಳಿಗೆ ರಜೆಯನ್ನು ಘೋಷಿಸಿತ್ತು. ಆದರೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಮಕ್ಕಳಿಲ್ಲದೇ, ಕೆಲಸವಿಲ್ಲದೇ ಶಾಲೆಗಳಿಗೆ ಹೋಗಿ ಬರುತ್ತಿದ್ದಾರೆ. ಕೊರೊನಾ ವೈರಾಣು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಮಾಸ್ಕ್ ಮತ್ತು ಸ್ಯಾನಿಟೈಸ್ ಬಳಕೆ ಮಾಡುವ ಅನಿವಾರ್ಯತೆಯ ಎದುರಾಗಿದೆ.

ಆದರೆ ಶಾಲೆಯಲ್ಲಿನ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ನಡೆಸಲು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಬೋಧಕೇತರ ಸಿಬ್ಬಂದಿಗಳು ಮಾತ್ರ ಹಾಜರಿದ್ದರೆ ಸಾಕು. ಆದರೆ ಶಿಕ್ಷಕರು ನಿತ್ಯವೂ ಶಾಲೆಗಳಿಗೆ ಬಂದು ಹೋಗುವುದು ಸಮಂಜಸವಲ್ಲ. ಹೀಗಾಗಿ ಶಾಲೆಗಳು ಮಕ್ಕಳ ಹಾಜರಾತಿಯೊಂದಿಗೆ ಆರಂಭವಾಗುವವರೆಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಬೇಕು. ಈ ರಜೆಯ ಅವಧಿಯನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಿಕೊಳ್ಳಬಹುದು ಬಸವರಾಜ ಹೊರಟ್ಟಿ ಪತ್ರದ ಮೂಲಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಆಗ್ರಹಿಸಿದ್ದಾರೆ.