ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮುಚ್ಚಿದ್ದ ಕಾಲೇಜುಗಳು ಇದೀಗ ಮತ್ತೆ ರೀ ಓಪನ್ ಆಗುತ್ತಿವೆ. ರಾಜ್ಯ ಸರಕಾರ ಈ ಕುರಿತು ಮಾರ್ಗಸೂಚಿಯನ್ನು ಹೊರಡಿಸಿದ್ದು, ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳುವುದು ಕಡ್ಡಾಯಗೊಳಿಸಿದೆ. ಆದರೆ ಭೌತಿಕ ಹಾಜರಾತಿಯಿಂದ ವಿನಾಯಿತಿಯನ್ನು ನೀಡಿದೆ.

ರಾಜ್ಯದಲ್ಲಿ ಇಂದಿನಿಂದ ಪದವಿ, ಸ್ನಾತಕೋತ್ತರ ತರಗತಿ ಹಾಗೂ ಬಿ.ಎಡ್ ಆಫ್‍ಲೈನ್ ತರಗತಿಗಳು ಪುನರಾರಂಭಗೊಳ್ಳಲಿವೆ. ಕಾಲೇಜುಗಳಲ್ಲಿ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿ ಗಳು, ಬೋಧಕರು, ಬೋಧಕೇತರ ಸಿಬ್ಬಂಧಿಗಳು ಕಡ್ಡಾಯವಾಗಿ ಕೊರೊನಾ ಒಂದು ಡೋಸ್ ಲಸಿಕೆಯನ್ನು ಪಡೆದಿರಲೇ ಬೇಕು. ಅಲ್ಲದೇ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಯಲ್ಲಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸಲೇ ಬೇಕು.

ಯುಜಿಸಿ (UGC) ನಿರ್ದೇಶನದಂತೆ ರಾಜ್ಯದಲ್ಲಿ ಕಾಲೇಜುಗಳು ಆರಂಭಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಕಡ್ಡಾಯ ಆಫ್‌ಲೈನ್ ಹಾಜರಾತಿಯಿಂದ ವಿನಾಯಿತಿಯನ್ನು ನೀಡಲಾಗಿದ್ದು, ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಕಾಲೇಜುಗಳು ತರಗತಿಗಳನ್ನು ಸ್ಯಾನಿಟೈಸ್ ಮಾಡಿಸಬೇಕು. ಪ್ರಯೋಗಾಲಯ, ಕಾಲೇಜಿನ ಕ್ಯಾಂಪಸ್ ಸಂಪೂರ್ಣವಾಗಿ ಕೊರೊನಾ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಸೇರಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರಕಾರ ಈಗಾಗಲೇ ಮಾರ್ಗಸೂಚನೆಯನ್ನು ಹೊರಡಿಸಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಇಂದಿನಿಂದ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ಕಾಲೇಜುಗಳು ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆಯನ್ನು ಮಾಡಬೇಕು. ಮಾರ್ಗಸೂಚಿ ಉಲ್ಲಂಘನೆ ಮಾಡುವ ವಿದ್ಯಾ ಸಂಸ್ಥೆಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ತಿಳಿಸಿದ್ದಾರೆ.