ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ನವೆಂಬರ್ 17 ರಿಂದ ರಾಜ್ಯದ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾರ್ಗಸೂಚಿ ಯನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲೇ ಬೇಕಾಗಿದ್ದು, ಕಾಲೇಜಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ.

ರಾಜ್ಯ ಸರಕಾರ ಕಾಲೇಜುಗಳನ್ನು ಪುನರಾರಂಭಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ತರಗತಿಗಳಿಗೆ ವಿದ್ಯಾರ್ಥಿಗಳು ತಮ್ಮಿಷ್ಟದಂತೆ ಹಾಜರಾಗುವಂತಿಲ್ಲ. ಕಾಲೇಜುಗಳು ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ತರಗತಿಗೆ ಹಾಜರಾಗಲೇ ಬೇಕು ಎಂದು ಆದೇಶಿಸುವಂತಿಲ್ಲ.
ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾದ್ರೆ ಪೋಷಕರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಲೇ ಬೇಕು. ಇನ್ನು ತರಗತಿಗಳಿಗೆ ಹಾಜರಾಗದವರಿಗೆ ಆನ್ಲೈನ್ ಕ್ಲಾಸ್ ನಡೆಸಲಾಗುವುದು. ಆರೋಗ್ಯ ಇಲಾಖೆಯ ಮಾರ್ಗಸೂಚಿ ಯಂತೆ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಕಾಲೇಜಿಗೆ ಹಾಜರಾಗುವ ಮೂರು ದಿನ ಮೊದಲು ಕೋವಿಡ್ ಟೆಸ್ಟ್ ಮಾಡಿಸಬೇಕು ಎಂದು ಹೇಳಲಾಗಿದೆ.

ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಬೇಕಿದ್ದು, ನೆಗೆಟಿವ್ ವರದಿ ಬಂದರೆ ಮಾತ್ರ ಕಾಲೇಜಿಗೆ ಬರಬೇಕು. ಕೊಠಡಿ, ಪೀಠೋಪಕರಣ, ಪಠ್ಯ ಸಾಮಗ್ರಿ, ಸ್ಯಾನಿಟೈಸ್ ಮಾಡಬೇಕು. ಕಾಲೇಜುಗಳ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಮ್ಯಾಪಿಂಗ್ ಮಾಡಿಕೊಳ್ಳಬೇಕು.
ಮನೆಯಿಂದಲೇ ಊಟ, ಕುಡಿಯುವ ನೀರು ತರಬೇಕು.
ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್, ಫೇಸ್ ಶೀಲ್ಡ್ ಧರಿಸಬೇಕು. ಕಾಲೇಜುಗಳಲ್ಲಿ ಲೈಬ್ರರಿ, ಕ್ಯಾಂಟೀನ್ ತೆರೆಯುವಂತಿಲ್ಲ. ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಎನ್.ಸಿ.ಸಿ., ಎನ್ಎಸ್ಎಸ್ ಚಟುವಟಿಕೆ ಪ್ರಾರಂಭಿಸುವಂತಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.