ಮಂಗಳೂರು : ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆಯನ್ನು ಕಡ್ಡಾಯ ಗೊಳಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳದೇ ಕಾಲೇಜಿಗೆ ಹಾಜರಾಗುವಂತಿಲ್ಲ ಅನ್ನುವ ಸರಕಾರದ ಆದೇಶದ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು, ಮಂಗಳೂರಿನ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ಹಾಗೂ ನಾಲ್ವರು ಪೋಷಕರು, ವಕೀಲರ ಮೂಲಕ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ್ದಾರೆ.
18 ವರ್ಷ ಮೀರಿದ ಎಲ್ಲ ವಿದ್ಯಾರ್ಥಿಗಳು, ಸಿಬ್ಬಂದಿಗೆ ಲಸಿಕೆ ಅಭಿಯಾನ ನಡೆಸಲಾಗು ವುದು. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಡೋಸ್ ಲಸಿಕೆಯನ್ನು ಪಡೆದಿರಬೇಕು. ಇಲ್ಲದಿದ್ದಲ್ಲಿ ಕಾಲೇಜು ಪ್ರವೇಶಿಸಲು ಅವಕಾಶ ಇಲ್ಲ ಎಂದು ಕೋವಿಡ್ ಕಾರ್ಯಪಡೆ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಅವರು ಮಾಧ್ಯಮ ಗಳ ಮೂಲಕ ತಿಳಿಸಿದ್ದಾರೆ. ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈ ನೋಟಿಸ್ ನೀಡಲಾಗಿದೆ.
ಕೊರೊನಾ ಲಸಿಕೆಯನ್ನು ಪಡೆಯಲೇ ಬೇಕೆಂದು ಒತ್ತಡ ಹೇರುವ ಅಧಿಕಾರ ಸರ್ಕಾರಕ್ಕಿಲ್ಲ. ಈಗಾಗಲೇ ಮೇಘಾಲಯ, ಗುಜರಾತ್ ಸರ್ಕಾರದ ನಿಲುವಿಗೆ ಅಲ್ಲಿನ ಹೈಕೋರ್ಟ್ ತಡೆಯಾಜ್ಞೆ ನೀಡಲಾಗಿದೆ. ಹೀಗಾಗಿ ಇದೇ ಆದೇಶದ ಪ್ರತಿಯನ್ನು ಲಗತ್ತಿಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.