ಭಾನುವಾರ, ಏಪ್ರಿಲ್ 27, 2025
Homeeducationಪಠ್ಯಕಡಿತ ಆದೇಶಕ್ಕೆ ತಾತ್ಕಾಲಿಕ ಬ್ರೇಕ್ : ಗೊಂದಲ ಬೇಡವೆಂದ ಸಚಿವ ಸುರೇಶ್ ಕುಮಾರ್

ಪಠ್ಯಕಡಿತ ಆದೇಶಕ್ಕೆ ತಾತ್ಕಾಲಿಕ ಬ್ರೇಕ್ : ಗೊಂದಲ ಬೇಡವೆಂದ ಸಚಿವ ಸುರೇಶ್ ಕುಮಾರ್

- Advertisement -

ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆಯಲ್ಲಿ 1 ರಿಂದ 10ನೇ ತರಗತಿಯ ಪಠ್ಯದಲ್ಲಿ ಕಡಿತಗೊಳಿಸಲಾಗಿದೆ. ಆದರೆ ಸ್ವಾತಂತ್ರ್ಯ ಹೋರಾಟಗಾರರು, ದೇಶ ಭಕ್ತರ ಪಾಠಗಳನ್ನು ಕಡಿತಗೊಳಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ಪಠ್ಯಕಡಿತದ ಆದೇಶವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ರೆ, ಯಾವುದೇ ಗೊಂದಲ ಬೇಡಾ ಅಂತಾ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಕೋವಿಡ್ 19ರ ಕಾರಣದಿಂದಾಗಿ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭ ವಿಳಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ 1 ರಿಂದ 10ನೇ ತರಗತಿಯ ಎಲ್ಲಾ ವಿಯಷಗಳ ಪಠ್ಯಾಂಶಗಳನ್ನು ಇಲಾಖೆಯ ನಿರ್ದೇಶದಂತೆ 120 ಶಾಲಾ ಕೆಲಸದ ದಿನಗಳಿಗೆ ಕಡಿತಗೊಳಿಸಿ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿತ್ತು. ಆದರೆ ಸಚಿವರ ಸೂಚನೆಯ ಮೇರೆಗೆ ಶಿಕ್ಷಣ ಇಲಾಖೆ ಪಠ್ಯ ಕಡಿತ ಆದೇಶಕ್ಕೆ ತಾತ್ಕಾಲಿಕವಾಗಿ ತಡೆ ನೀಡಿದೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೋವಿಡ್ 19 ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವೈಜ್ಞಾನಿಕವಾಗಿಯೇ ಪಠ್ಯ ಕಡಿತ ಮಾಡಿದೆ. ಆದರೆ ಶೈಕ್ಷಣಿಕ ವರ್ಷದ ಅವಧಿ ನಿಗದಿಯಾಗದ ಹಿನ್ನೆಲೆಯಲ್ಲಿ ಪಠ್ಯಾಂಶಗಳನ್ನು ಅಂತಿಮಗೊಳಿಸಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗದಿರುವುದರಿಂದ ನಮಗೆ ಎಷ್ಟು ದಿನಗಳು ದೊರೆಯುತ್ತವೆಂಬುದು ಇನ್ನೂ ಅಸ್ಪಷ್ಟವಾಗಿದೆ. ಹೀಗಾಗಿ ಪಠ್ಯಕ್ರಮವನ್ನು ಅಂತಿಮಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಲಭ್ಯ ಅವಧಿಯ ಆಧಾರದ ಮೇಲೆ ಮಾಡಲಾಗುವ ಪಠ್ಯ ಕಡಿತವು ವೈಜ್ಞಾನಿಕವಾಗಿರಲಿದ್ದು, ಯಾವುದೇ ಪಠ್ಯವನ್ನು ಅನಗತ್ಯವಾಗಿ ಕಡಿತ ಮಾಡುವುದಿಲ್ಲ. ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ.

ಈ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಾಗಬಹುದಾದ ಬೋಧನಾ ಅವಧಿ, ಸಮೂಹ ಮಾಧ್ಯಮಗಳು ಅಥವಾ ತಂತ್ರಜ್ಞಾನಾಧಾರಿತ ಬೋಧನೆಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬಹುದಾದ ಪಠ್ಯಗಳನ್ನು ಗುರುತಿಸಿ ಇಲಾಖೆಯ ತಂತ್ರಜ್ಞಾನಾಧಾರಿತ ಕಲಿಕಾ ನೀತಿಗನುಗುಣವಾಗಿ ಪಠ್ಯ ಬೋಧನೆಯ ಮಾದರಿಗಳನ್ನು ರಚನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಎಲ್ಲ ಕ್ರಮಗಳು ಅಂತಿಮಗೊಳ್ಳುವ ಪೂರ್ವದಲ್ಲಿಯೇ ಅಚಾತುರ್ಯದಿಂದ ಇಲಾಖೆಯ ಜಾಲತಾಣದಲ್ಲಿ ಅನುಮೋದಿತವಾಗದ ಪಠ್ಯಾಂಶಗಳನ್ನು ಪ್ರಕಟಿಸಲಾಗಿದೆ. ಇದನ್ನು ಕೂಡಲೇ ಹಿಂಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ, ದಾಖಲೆಯ, ಸಂಗತಿಯ ಐತಿಹ್ಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆಯೇ ಹೊರತು ಕೆಡವುವ ಕೆಲಸ ಮಾಡುವುದಿಲ್ಲ. ಅನವಶ್ಯಕ ರಾಜಕೀಯ ಗೊಂದಲಗಳಿಗೆ ಅವಕಾಶ ಕಲ್ಪಿಸಬೇಕಿಲ್ಲ ಎಂದು ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular