
ದಾವಣಗೆರೆ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದೊಂದು ವಾರದಿಂದಲೂ ಒಟ್ಟು 6 ಮಂದಿ ಶಿಕ್ಷಕರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಇದೀಗ ಮತ್ತೊರ್ವ ಶಿಕ್ಷಕಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಶಿಕ್ಷಕರನ್ನು ಕಂಗೆಡಿಸಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಪ್ರಾಥಮಿಕ ಶಾಲೆಯ ಸಹಶಿಕ್ಷಕಿಯಾಗಿರುವ ಭಾಗೀರಥಿ ಅವರೇ ಸಾವನ್ನಪ್ಪಿದ ಶಿಕ್ಷಕಿ. ರಾಜ್ಯದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟ ಹೆಚ್ಚುತ್ತಿದ್ರೆ, ಇನ್ನೊಂದೆಡೆ ಶಿಕ್ಷಕರು ಕೊರೊನಾ ಡ್ಯೂಟಿಯ ಜೊತೆಗೆ ವಿದ್ಯಾಗಮ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ವಿದ್ಯಾಗಮ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಕಾಯಕವನ್ನು ಮಾಡಲಾಗುತ್ತಿದೆ. ಆದರೆ ಮನೆ ಮನೆಗೆ ತೆರಳುವ ಶಿಕ್ಷಕರಿಗೆ ಇಲಾಖೆ ಮಾಸ್ಕ್ ಆಗಲಿ, ಪಿಪಿಇ ಕಿಟ್ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದಾಗಿಯೇ ರಾಜ್ಯದಲ್ಲಿ ಇದುವರೆಗೂ 10ಕ್ಕೂ ಅಧಿಕ ಶಿಕ್ಷಕರು ಸಾವನ್ನಪ್ಪಿದ್ದಾರೆ.

ಇದೀಗ ಶಿಕ್ಷಕಿಯ ಸಾವು ಶಿಕ್ಷಕರ ಸಮುದಾಯವನ್ನೇ ಕಂಗಾಲಾಗುವಂತೆ ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮನೆ ಮನೆಗೆ ತೆರಳು ಶಿಕ್ಷಕರಿಗೆ ಕನಿಷ್ಠ ರಕ್ಷಣಾ ಪರಿಕರಗಳನ್ನು ಒದಗಿಸದಿರುವುದು ದುರಂತವೇ ಸರಿ. ಮಾದರಿ ಕಾರ್ಯಕ್ರಮಗಳನ್ನು ರೂಪಿಸುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೂಡ ಕೊರೊನಾ ಹೆಮ್ಮಾರಿಗೆ ಶಿಕ್ಷಕರು ಬಲಿಯಾಗುತ್ತಿದ್ದರೂ ಮೌನವಾಗಿರೋದು ಮಾತ್ರ ವಿಪರ್ಯಾಸವೇ ಸರಿ.