ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿದೆ. ಹೀಗಾಗಿ ಈ ಬಾರಿ ಶೈಕ್ಷಣಿ ವರ್ಷಾರಂಭವೇ ಗೊಂದಲದ ಗೂಡಾಗಿದೆ. ಈ ನಡುವಲ್ಲೇ ಶಿಕ್ಷಣ ಇಲಾಖೆ ಶಾಲಾರಂಭ ಮಾಡಿದ್ರು ಶೇ.50 ರಷ್ಟು ಪಠ್ಯ ಕಡಿತಕ್ಕೆ ಚಿಂತನೆಯನ್ನು ನಡೆಸಿದೆ.

ವರ್ಷಂಪ್ರತಿ ಜೂನ್ ತಿಂಗಳಿನಲ್ಲಿಯೇ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳುತ್ತಿದ್ದವು. ಆದರೆ ಕಳೆದ 5 ತಿಂಗಳುಗಳಿಂದಲೂ ಶಾಲಾ, ಕಾಲೇಜುಗಳು ಆರಂಭಗೊಂಡಿಲ್ಲ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆ ಒಂದೆರಡು ಬಾರಿ ಶಾಲೆ, ಕಾಲೇಜುಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿದ್ದರೂ ಕೂಡ ಕೊನೆಯ ಕ್ಷಣದಲ್ಲಿ ಶಾಲಾರಂಭವನ್ನು ರದ್ದು ಮಾಡಿತ್ತು.

ಈ ಹಿಂದೆ ಅಗಸ್ಟ್ ಅಥವಾ ಸಪ್ಟೆಂಬರ್ ತಿಂಗಳಿನಲ್ಲಿ ಶಾಲೆಗಳು ಆರಂಭಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಶಾಲಾ ಪಠ್ಯದಲ್ಲಿ ಶೇ.30 ರಷ್ಟು ಕಡಿತವನ್ನು ಮಾಡಲಾಗಿತ್ತು. ಆದ್ರೀಗ ಅಕ್ಟೋಬರ್ ತಿಂಗಳು ಆರಂಭಗೊಂಡರೂ ಶಾಲೆ, ಕಾಲೇಜು ಆರಂಭಗೊಂಡಿಲ್ಲ. ಅಲ್ಲದೇ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ಗಮನಿಸಿದ್ರೆ ಸದ್ಯಕ್ಕೆ ಶಾಲಾರಂಭವಾಗೋದು ಅನುಮಾನ. ಈ ನಡುವಲ್ಲೇ ಉಳಿದ ಅರ್ಧ ವರ್ಷಕ್ಕೆ ಶೇ. 50ರಷ್ಟು ಪಠ್ಯ ಬೋಧನೆ ಮಾತ್ರ ಇರಬೇಕು ಎಂಬ ಪ್ರಸ್ತಾವನೆಯೊಂದನ್ನು ಕಾಲೇಜು ಮತ್ತು ಶಾಲಾ ಶಿಕ್ಷಕರ ಸಂಘವು ಸರಕಾರದ ಮುಂದಿರಿಸಿದೆ.

ಶಿಕ್ಷಣ ಇಲಾಖೆ ಈ ಹಿಂದೆ ಪ್ಲ್ಯಾನ್ ಮಾಡಿದಂತೆ ಶೇ.30 ರಷ್ಟು ಪಠ್ಯ ಕಡಿತ ಮಾಡಿದೆ. ಆದರೆ ಒಂದೊಮ್ಮೆ ನವೆಂಬರ್ ತಿಂಗಳಲ್ಲಿ ಶಾಲಾರಂಭಗೊಂಡರು ಶೈಕ್ಷಣಿಕ ವರ್ಷ ಬಾಕಿಯಿರುವುದು 5 ತಿಂಗಳು ಮಾತ್ರ. ಉಳಿದ 130 ದಿನಗಳ ಅಧಿಯಲ್ಲಿ ಶೇ.70 ರಷ್ಟು ಪಠ್ಯವನ್ನು ಪೂರ್ಣಗೊಳಿಸುವುದು ಅಸಾಧ್ಯ. ಅದ್ರಲ್ಲೂ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಪಾಳಿಪದ್ದತಿಯಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು. ಅಲ್ಲದೇ ವಾರದಲ್ಲಿ 5 ದಿನಗಳ ಕಾಲವಷ್ಟೇ ಪಠ್ಯ ಬೋಧನೆ ಮಾಡುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿಯೇ ಪಠ್ಯ ಕಡಿತದ ಪ್ರಸ್ತಾಪವನ್ನಿಡಲಾಗಿದೆ.

ಪದವಿ ಪೂರ್ವ ತರಗತಿಗಳನ್ನು ನವೆಂಬರ್ ತಿಂಗಳಿನಲ್ಲಿ ಆರಂಭಿಸುವುದಾಗಿ ಶಿಕ್ಷಣ ಇಲಾಖೆ ಈಗಾಗಲೇ ಘೋಷಣೆಯನ್ನು ಮಾಡಿದೆ. ಅಲ್ಲದೇ ಶೇ. 40 ರಷ್ಟು ಪಠ್ಯಕಡಿತವನ್ನು ಮಾಡಿದೆ. ಆದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಪಠ್ಯ ಬೋಧನೆ ಮಾಡುವುದರಿಂದ ಶಿಕ್ಷಕರು, ಉಪನ್ಯಾಸಕರಿಗೆ ಒತ್ತಡ ಹೆಚ್ಚಲಿದೆ. ಅಲ್ಲದೇ ಮಕ್ಕಳ ಬುದ್ದಿಮಟ್ಟದ ಮೇಲೆಯೂ ಗಂಭೀರ ಪರಿಣಾಮವನ್ನು ಬೀರಲಿದೆ. ಅಲ್ಲದೇ ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವಲ್ಲೇ ಶಿಕ್ಷಣ ನೀಡುವುದು ಕೂಡ ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪಠ್ಯ ಕಡಿತದ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕೆಂದು ಶಿಕ್ಷಕರು ಆಗ್ರಹಿಸಿದ್ದಾರೆ.

ಶಿಕ್ಷಕರು ಹಾಗೂ ಉಪನ್ಯಾಸಕರು ಮನವಿ ಮಾಡಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ಕೂಡ ಚಿಂತನೆಯನ್ನು ನಡೆಸಿದೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೆ ಶಾಲಾರಂಭ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಖಚಿತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾರಂಭದ ದಿನಾಂಕ ಘೋಷಣೆಯಾಗುವ ಮುನ್ನ ಶೇ.50 ರಷ್ಟು ಪಠ್ಯ ಕಡಿತವಾಗೋ ಸಾಧ್ಯತೆಯಿದೆ.

ಶಿಕ್ಷಣ ಇಲಾಖೆ ಪದೇ ಪದೇ ಗೊಂದಲವನ್ನು ಸೃಷ್ಟಿಸುವುದರ ಬದಲು, ಉಳಿದ ಶೈಕ್ಷಣಿಕ ಅವಧಿಯ ವರೆಗೆ ಸ್ಪಷ್ಟವಾದ ನಿರ್ಧಾರವನ್ನು ಕೈಗೊಳ್ಳುವುದು ಒಳಿತು.