ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸದ್ಯಕ್ಕೆ ಶಾಲಾರಂಭವಿಲ್ಲವೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಆದ್ರೆ ರಾಜ್ಯ ಸರಕಾರ ಶಾಲೆಗಳನ್ನು ಆರಂಭಿಸಲು ತೆರೆಮರೆಯಲ್ಲಿಯೇ ಮಾರ್ಗಸೂಚಿಗಳನ್ನು ಸಿದ್ದಪಡಿಸಿದೆ !

ಹೌದು, ಪ್ರಸಕ್ತ ಶೈಕ್ಷಣಿಕ ವರ್ಷ ಇನ್ನೂ ಆರಂಭವಾಗಿಲ್ಲ ವಿದ್ಯಾರ್ಥಿಗಳಿಗೆ ವಿದ್ಯಾಗಮ, ಆನ್ ಲೈನ್ ಮೂಲಕವೇ ಶಿಕ್ಷಣವನ್ನು ಬೋಧಿಸಲಾಗುತ್ತಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವ ನಡುವಲ್ಲೇ ಶಾಲಾರಂಭ ಮಾಡಲು ಕಷ್ಟ ಸಾಧ್ಯ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

ಅಲ್ಲದೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಶಾಲೆ ಪುನರ್ ಆರಂಭಿಸಲು ಸರ್ಕಾರ ಯಾವುದೇ ದಿನಾಂಕವನ್ನೂ ನಿಗದಿ ಮಾಡಿಲ್ಲ. ಪಾಲಕರು, ಶಿಕ್ಷಣ ತಜ್ಞರು ಮತ್ತಿತರರ ಜೊತೆಗೆ ಚರ್ಚಿಸಿದ ಬಳಿಕವೇ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಹೇಳಿದ್ದರು. ಆದರೆ ಇಲಾಖೆಯ ಅಧಿಕಾರಿಗಳು ಮಾತ್ರ ಶಾಲಾರಂಭದ ಮಾರ್ಗಸೂಚಿಗಳು ಸಿದ್ದವಾಗಿದೆ ಎನ್ನುತ್ತಿದ್ದಾರೆ.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಈಗಾಗಲೇ 2020-21ನೇ ಸಾಲಿನ ಶಾಲಾರಂಭದ ಕುರಿತು ಮಾರ್ಗಸೂಚಿ ಯನ್ನು ಸಿದ್ದಪಡಿಸಿದೆ. ಪ್ರಮುಖವಾಗಿ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಅನುಸರಿಸ ಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಆಯಾಯ ಮಕ್ಕಳ ಪೋಷಕರೇ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

ಮಕ್ಕಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗುತ್ತಿದ್ದು, ಪ್ರತೀ ಮಕ್ಕಳಿಗೂ ಎರಡೆರಡು ಮಾಸ್ಕ್ ತೊಡಿಸುವಂತೆ ಹೇಳಲಾಗುತ್ತಿದೆ. ಶಾಲೆಗೆ ಮಕ್ಕಳನ್ನು ಕಳುಹಿಸುವಾಗ ಪುಸ್ತಕ ಹಾಗೂ ಬ್ಯಾಗಿನ ಜೊತೆಯಲ್ಲಿ ತಟ್ಟೆ, ನ್ಯಾಪ್ ಕಿನ್, ವಾಟರ್ ಬಾಟಲ್ ಹಾಗೂ ಸ್ಯಾನಿಟೈಸರ್ ಕಳುಹಿಸಿಕೊಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಶಾಲೆಗಳು ಆರಂಭಕ್ಕೆ ಒಂದು ವಾರದ ಮೊದಲು ಇಡೀ ಶಾಲೆಯನ್ನು ಸ್ಯಾನಿಟೈಸ್ ಮಾಡಬೇಕು. ಪೀಠೋಪಕರಣ, ಲ್ಯಾಬ್, ಕೊಠಡಿ ಸೇರಿದಂತೆ ಶಾಲಾ ಸ್ವಚ್ಚತೆ. ವೇಳಾಪಟ್ಟಿ, ಶಿಕ್ಷಕರ ಕರ್ತವ್ಯ, ಪೋಷಕರು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಕುರಿತು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟದ ಪಾತ್ರೆಗಳು, ಆಹಾರ ಧಾನ್ಯ ಸಂಗ್ರಹಿಸಿಡುವ ಡಬ್ಬಿಗಳನ್ನು ನಿತ್ಯ ತೊಳೆಯಬೇಕು ಎಂದೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.