ನವದೆಹಲಿ : ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಶೈಕ್ಷಣಿಕವಾಗಿ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಸೋಂಕಿನ ಹರಡದಂತೆ ತಡೆಯುವ ಉದ್ದೇಶದಿಂದ ಸದ್ಯಕ್ಕೆ ಶಾಲಾ, ಕಾಲೇಜುಗಳು ಆರಂಭವಾಗೋದಿಲ್ಲ. ಅಲ್ಲದೇ ಕೊರೊನಾ ಹಿನ್ನೆಲೆಯಲ್ಲಿ ವರ್ಷದಲ್ಲಿ ಕೇವಲ 100 ದಿನಗಳ ಕಾಲ ಮಾತ್ರವೇ ಶಾಲೆಗಳನ್ನು ಆರಂಭಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.

ವಿಶ್ವದಾದ್ಯಂತ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದೆ. ಶಾಲೆ, ಕಾಲೇಜುಗಳನ್ನು ಆರಂಭಿಸಿದ್ರೆ ಸೋಂಕು ಇನ್ನಷ್ಟು ತೀವ್ರವಾಗಿ ಹರಡುವ ಆತಂಕವೂ ಇದೆ. ಈ ನಡುವಲ್ಲೇ ಕೇಂದ್ರ ಸರಕಾರ ಶಿಕ್ಷಣ ಪದ್ದತಿಯಲ್ಲಿ ಹಲವು ಬದಲಾವಣೆಗಳನ್ನು ತರಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮಾರ್ಗಸೂಚಿಯನ್ನೂ ಸಿದ್ದಪಡಿಸುತ್ತಿದೆ. ಕೊರೊನಾ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶಾಲೆ, ಕಾಲೇಜು ಆರಂಭಿಸಲು ಪ್ಲ್ಯಾನ್ ರೂಪಿಸುತ್ತಿದೆ.

ಸಾಮಾನ್ಯವಾಗಿ ವರ್ಷದಲ್ಲಿ 220 ದಿನಗಳ ಕಾಲ ಶಾಲಾ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಕೇವಲ 100 ದಿನಗಳ ಕಾಲ ಶೈಕ್ಷಣಿಕ ಚಟುವಟಿಕೆ ನಡೆಸಿ, ಉಳಿದ 100 ದಿನಗಳನ್ನು ಮಕ್ಕಳು ಮನೆಯಲ್ಲಿಯೇ ಶಿಕ್ಷಣ ಪಡೆಯುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಗಂಭೀರ ಚಿಂತನೆಯನ್ನು ನಡೆಸುತ್ತಿದೆ.

ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲಕ ಸಚಿವಾಲಯ ಶೀಘ್ರದಲ್ಲಿಯೇ ಮಾರ್ಗಸೂಚಿಯೊಂದನ್ನು ಹೊರಡಿಸಲಿದೆ. ಈ ಮಾರ್ಗಸೂಚಿಯಲ್ಲಿ ಶಾಲೆಯಲ್ಲಿ ಮಕ್ಕಳ ಕಲಿಕೆಯ ದಿನ 100ಕ್ಕೆ ಇಳಿಕೆಯಾಗುವುದು ಖಚಿತ. ಉಳಿದಂತೆ ಯಾವಲ್ಲಾ ರೀತಿಯ ಬದಲಾವಣೆಗಳನ್ನು ಮಾಡಲಾಗುತ್ತದೆ ಅನ್ನೋದು ಮಾರ್ಗಸೂಚಿ ಹೊರಡಿಸಿದ ನಂತರವಷ್ಟೇ ತಿಳಿಯಲಿದೆ. ಒಟ್ಟಿನಲ್ಲಿ ಕೇಂದ್ರ ಸರಕಾರ ಐಟಿ -ಬಿಟಿ ಕಂಪೆನಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡಿದಂತೆ, ಮಕ್ಕಳಿಗೆ ಲರ್ನ್ ಫ್ರಮ್ ಹೋಮ್ ಮಾಡಲು ಚಿಂತನೆ ನಡೆಸಿದೆ.