ಬೆಂಗಳೂರು : ಕೊರೊನಾ ಆತಂಕದ ನಡುವಲ್ಲೇ ರಾಜ್ಯ ಸರಕಾರ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿರುವುದಾಗಿ ಹೇಳಿಕೊಳ್ಳುತ್ತಿದೆ. ಮಕ್ಕಳಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಎನ್ನುತ್ತಿದೆ. ಆದರೆ ಜೂನ್ 25 ಮತ್ತು ಜುಲೈ 3 ರ ನಡುವೆ ಪರೀಕ್ಷೆ ಬರೆದ ಒಟ್ಟು 32 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.

ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುವುದಕ್ಕೆ ಪೋಷಕರು ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೂ ರಾಜ್ಯ ಸರಕಾರ ಪರೀಕ್ಷೆಯನ್ನು ಮುಗಿಸಿದೆ. 7.60 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಆದರೆ
ಕಂಟೈನ್‌ಮೆಂಟ್ ವಲಯಗಳಲ್ಲಿರುವ 3,911 ವಿದ್ಯಾರ್ಥಿಗಳು ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ 863 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 14,745 ಮಂದಿ ಗೈರು ಹಾಜರಾಗಿದ್ದರು. ಇದೀಗ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ಒಟ್ಟು 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 80 ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಇನ್ನು ಎಸ್ಎಸ್ಎಲ್ ಸಿ ಪರೀಕ್ಷೆಯ ನಡುವಲ್ಲೇ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರು ಕೂಡ ಕೆಲವು ಕಡೆಗಳಲ್ಲಿ ಉಳಿದ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿಲ್ಲ. ಇನ್ನೂ ಕೆಲವೆಡೆ ಕೊರೊನಾ ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದ ಕೊಠಡಿಯಲ್ಲಿಯೇ ಮರು ದಿನ ಸ್ಯಾನಿಟೈಸ್ ಮಾಡಿ ಪರೀಕ್ಷೆ ಬರೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಪರೀಕ್ಷಾ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ ಶಿಕ್ಷಕರಿಗೂ ಕೊರೊನಾ ತಪಾಸಣೆಯನ್ನು ನಡೆಸಿಲ್ಲ. ಹೀಗಾಗಿ ಕೊರೊನಾ ಸೋಂಕು ಹರಡುವ ಆತಂಕ ಎದುರಾಗಿದೆ.