ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಉನ್ನತ ಶಿಕ್ಷಣ ಇಲಾಖೆ ಅಕ್ಟೋಬರ್ 1 ರಿಂದ ರಾಜ್ಯದಲ್ಲಿ ಪದವಿ ಕಾಲೇಜುಗಳನ್ನು ಪುನರಾರಂಭಿಸಲು ಮುಂದಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡು ತರಗತಿ ನಡೆಸುವಂತೆ ಯುಜಿಸಿ ಸೂಚಿಸಿದೆ. ಈ ನಡುವಲ್ಲೇ ಅನ್ ಲಾಕ್ 3.0 ಅಂತ್ಯವಾಗಲಿದ್ದು, ಸಪ್ಟೆಂಬರ್ ತಿಂಗಳಿನಿಂದಲೇ ರಾಜ್ಯದಲ್ಲಿ ಶಾಲೆಗಳು ಪುನರಾರಂಭಗೊಳ್ಳುತ್ತಾ ಅನ್ನುವ ಪ್ರಶ್ನೆ ಎದುರಾಗಿದೆ.

ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ರಾಜ್ಯದ್ಲಲಿ ಶೈಕ್ಷಣಿಕ ಚಟುವಟಿಕೆ ಸಂಪೂರ್ಣವಾಗಿ ಸ್ಥಬ್ದವಾಗಿತ್ತು. ಶಾಲಾ, ಕಾಲೇಜುಗಳನ್ನು ಮಾರ್ಚ್ ಅಂತ್ಯದಿಂದಲೇ ಮುಚ್ಚಲಾಗಿತ್ತು. ಇದೀಗ ಸುಮಾರು ತಿಂಗಳ ನಂತರದಲ್ಲಿ ಯುಜಿಸಿ ಕಾಲೇಜು ತೆರೆಯಲು ಅವಕಾಶವನ್ನು ಕಲ್ಪಿಸಿದೆ. ಈಗಾಗಲೇ ಪ್ರಥಮ ಹಾಗೂ ದ್ವಿತೀಯ ಪದವಿ ತರಗತಿಗಳಿಗೆ ಪರೀಕ್ಷೆಯನ್ನೇ ರದ್ದು ಮಾಡಲಾಗಿತ್ತು.

ಆದರೆ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯವೆಂದಿತ್ತು. ಆದ್ರೆ ಇದುವರೆಗೂ ಅಂತಿಮ ಪದವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿಲ್ಲ. ಈ ನಡುವಲ್ಲೇ ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಾ ಅನ್ನುವ ಅನುಮಾನ ವ್ಯಕ್ತವಾಗಿತ್ತು. ಆದ್ರೀಗ ಯುಜಿಸಿ ಕಾಲೇಜು ಪುನರರಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಉನ್ನತ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಕಾಲೇಜುಗಳನ್ನು ಆರಂಭಿಸಲು ಮುಂದಾಗಿದೆ.

ಕೊರೊನಾ ವೈರಸ್ ಸೋಂಕಿನ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ನಿತ್ಯವೂ 4 ಗಂಟೆಗಳ ಕಾಲ ಮಾತ್ರವೇ ಶೈಕ್ಷಣಿಕ ಚಟುವಟಿಕೆಯನ್ನು ನಡೆಸಲಾಗುತ್ತದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಅಕ್ಟೋಬರ್ 1 ರಿಂದ ಕಾಲೇಜುಗಳಲ್ಲಿ ತರಗತಿ ಆರಂಭಗೊಂಡ್ರೆ, ಸಪ್ಟೆಂಬರ್ 1ರಿಂದಲೇ ಆನ್ ಲೈನ್ ತರಗತಿಯನ್ನು ಆರಂಭಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ ಈ ಕುರಿತು ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.

ಅಗಸ್ಟ್ 31 ಅನ್ ಲಾಕ್ 3.0 ಮುಕ್ತಾಯವಾಗಲಿದ್ದು, ಅನ್ ಲಾಕ್ 4.0 ಮಾರ್ಗಸೂಚಿಯ ಅನ್ವಯ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಕುರಿತು ಕೇಂದ್ರ ಸರಕಾರ ಮಾರ್ಗಸೂಚಿಯನ್ನು ಹೊರಡಿಸುವ ಸಾಧ್ಯತೆಯಿದೆ. ಈ ಹಿಂದೆ ಸಪ್ಟೆಂಬರ್ 1ರಿಂದಲೇ ಶಾಲೆ ಹಾಗೂ ಪದವಿ ಪೂರ್ವ ತರಗತಿಗಳು ಆರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಜೊತೆಗೆ ಕೇಂದ್ರ ಸರಕಾರ ಕೂಡ ಸಪ್ಟೆಂಬರ್ ತಿಂಗಳಿನಿಂದಲೇ 10ನೇ ತರಗತಿ ಹಾಗೂ ಪದವಿ ಪೂರ್ವ ತರಗತಿಗಳನ್ನು ಆರಂಭಿಸುವುದಾಗಿ ಹೇಳಿತ್ತು. ಅದರೆ ಪ್ರಾಥಮಿಕ ಹಾಗೂ 8 ಮತ್ತು 9ನೇ ತರಗತಿಗಳನ್ನು ನವೆಂಬರ್ ನಿಂದ ಆರಂಭಿಸಲು ಪ್ಲ್ಯಾನ್ ಮಾಡಿತ್ತು.

ಇದೀಗ ಪದವಿ ತರಗತಿಗಳು ಆರಂಭವಾದ ನಂತರವೇ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ತೆರೆಯುವ ಚಿಂತನೆಯಲ್ಲಿದೆ ಕೇಂದ್ರ ಸರಕಾರ. ಇನ್ನು ರಾಜ್ಯ ಸರಕಾರ ಕೇಂದ್ರ ಸರಕಾರ ಹೊರಡಿಸುವ ಮಾರ್ಗಸೂಚಿಯನ್ನು ಕಾಯುತ್ತಿದ್ದು, ಪೋಷಕರ ಅಭಿಪ್ರಾಯ ಸಂಗ್ರಹದ ಆಧಾರದ ಮೇಲೆ ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಶಾಲೆ ಹಾಗೂ ಕಾಲೇಜುಗಳು ಸಪ್ಟೆಂಬರ್ ತಿಂಗಳಿನಲ್ಲಿ ಆರಂಭವಾಗುವುದು ಅನುಮಾನ.

ಈಗಾಗಲೇ ಬಹುತೇಕ ಅರ್ಧ ಶೈಕ್ಷಣಿಕ ವರ್ಷ ಮುಕ್ತಾಯಗೊಳ್ಳುತ್ತಿದ್ದು, ನವೆಂಬರ್ ತಿಂಗಳಿನಿಂದಲೇ ಶೈಕ್ಷಣಿಕ ಚಟುವಟಿಕೆ ಆರಂಭಗೊಳ್ಳುವುದು ಬಹುತೇಕ ಪಕ್ಕಾ. ಶಾಲಾರಂಭ ವಿಳಂಭವಾಗುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈಗಾಗಲೇ ಶೇ.30ರಷ್ಟು ಪಠ್ಯಗಳನ್ನು ಕಡಿತಗೊಳಿಸಿದೆ. ಇದೀಗ ನವೆಂಬರ್ ನಿಂದ ಶೈಕ್ಷಣಿಕ ಚಟುವಟಿಕೆ ಆರಂಭವಾಗುವ ಹಿನ್ನೆಲೆಯಲ್ಲಿ ಪಠ್ಯಕ್ರಮದಲ್ಲಿಯೂ ಇನ್ನಷ್ಟು ಕಡಿತವಾಗುವ ಸಾಧ್ಯತೆಯಿದೆ.

ಪ್ರಸ್ತುತ ಜಾರಿಯಲ್ಲಿರುವ ಕಿರು ಪರೀಕ್ಷೆ, ಮಧ್ಯ ಪರೀಕ್ಷೆಯ ಪದ್ದತಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೈಬಿಟ್ಟು ಸರಳ ರೀತಿಯಲ್ಲಿ ಪರೀಕ್ಷೆಯನ್ನು ನಡೆಸುವುದಕ್ಕೆ ಇಲಾಖೆ ಪ್ಲ್ಯಾನ್ ರೂಪಿಸಿದೆ ಎಂದು ತಿಳಿದು ಬಂದಿದೆ. ಆದರೆ ಸೋಂಕು ಹರಡುವಿಕೆಯ ಹಿನ್ನೆಲೆಯಲ್ಲಿ ಒಮ್ಮೆಲೆ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವುದು ಕೂಡ ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿಯೇ ಇಲಾಖೆ ಹಂತ ಹಂತವಾಗಿ ಶಾಲೆ, ಕಾಲೇಜುಗಳನ್ನು ಆರಂಭಿಸಲು ಚಿಂತನೆ ನಡೆಸುತ್ತಿದೆ.