ಬೆಂಗಳೂರು : ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ದೇಶದೆಲ್ಲೆಡೆ ಲಾಕ್‌ಡೌನ್ ಮಾಡಲಾಗಿದೆ. ಇದರಿಂದ ಕಳೆದ ಮಾರ್ಚ್‌ನಿಂದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊರೊನಾ ದಿನದಿಂದ ದಿನಕ್ಕೆ ಅಬ್ಬರ ಹೆಚ್ಚಾಗುತ್ತಿದ್ದು ಲಾಕ್‌ಡೌನ್ ಮುಗಿಯುವವರೆಗೂ ಶಾಲಾ, ಕಾಲೇಜುಗಳು ಬಂದ್ ಆಗಲಿದೆ. ಈ ವರ್ಷದ ಶೈಕ್ಷಣಿಕ ವರ್ಷ ವಿಳಂಭವಾಗಿ ಆರಂಭವಾಗುವ ಹಿನ್ನೆಲೆ ಮಕ್ಕಳಿಗೆ ಹೊರೆ ಆಗದ ರೀತಿಯಲ್ಲಿ ಹೊಸ ಪ್ಲಾನ್ ರೂಪಿಸಲಾಗಿದೆ.

ಕಳೆದ ಬಾರಿ ಪ್ರವಾಹ ಪರಿಸ್ಥಿತಿ ಉಂಟಾದಾಗ ದಸರಾ ರಜೆಯನ್ನು ಕಡಿತ ಮಾಡುವುದರ ಜೊತೆಗೆ ಶನಿವಾರ ಹಾಗೂ ಭಾನುವಾರ ಮಕ್ಕಳಿಗೆ ಠ ಬೋಧನೆ ಮಾಡಲಾಗಿದೆ. ಇದರಿಂದಾಗಿ ಮಕ್ಕಳ ಕಲಿಕೆಗೆ ಹೊರೆಯಾಗಿತ್ತು. ಈ ನಿಟ್ಟಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. 1 ರಿಂದ 10 ನೇ ತರಗತಿ ಹಾಗೂ ಪದವಿ ಪೂರ್ವ ಶಿಕ್ಷಣದ ಪಠ್ಯಕ್ರಮದಲ್ಲಿ ಹೆಚ್ಚುವರಿಯಾಗಿರುವ ಪಠ್ಯಗಳನ್ನು ಗುರುತಿಸಿ, ಮಕ್ಕಳಿಗೆ ಕಲಿಕೆಗೆ ಹೊರೆಯಾಗದ ರೀತಿಯಲ್ಲಿ, ಪುನರಾವರ್ತಿತ ಪಠ್ಯವನ್ನ ಕೈಬಿಡಲು ಹಿರಿಯ ಅಧಿಕಾರಿಗಳಿಗೆ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.


ಕೊರೊನಾ ಲಾಕ್ ಡೌನ್ ಯಾವಾಗ ಮುಗಿಯುತ್ತೆ ಅನ್ನೋದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ 15 ದಿನಗಳ ವಿಳಂಭವಾಗಿ ಶೈಕ್ಷಣಿಕ ವರ್ಷ ಆರಂಭವಾದ್ರೆ ಯಾವೆಲ್ಲಾ ಪಾಠಗಳು ಕಡಿತವಾಗಬೇಕು. ಒಂದೊಮ್ಮೆ ಒಂದು ತಿಂಗಳ ಅವಧಿಯಾದ್ರೆ ಯಾವುದು ಹಾಗೂ 2 ತಿಂಗಳ ಅವಧಿಯಾದ್ರೆ ಯಾವೆಲ್ಲಾ ಪಾಠಗಳನ್ನು ಕಡಿತಗೊಳಿಸಬೇಕೆನ್ನುವ ಕುರಿತು ಕ್ರೀಯಾ ಯೋಜನೆಯನ್ನು ತಯಾರಿಸಿಕೊಳ್ಳಬೇಕು. ಅಲ್ಲದೇ ಯಾವ ಕಾರಣಕ್ಕೆ ಪಠ್ಯವನ್ನು ಕೈಬಿಡಲಾಗಿದೆ ಎನ್ನುವ ಬಗ್ಗೆಯೂ ಅಧಿಕಾರಿಗಳು ವಿಸ್ತ್ರತವಾದ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೊರೊನಾ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಕೋವಿಡ್ -19 ( ಕೊರೊನಾ) ಪಾಠವನ್ನು ಬೋಧಿಸಲು ಪ್ಲ್ಯಾನ್ ರೂಪಿಸಲಾಗಿದೆ. ಆಯಾಯ ವಯೋಮಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಆಕರ್ಷಣೀಯವಾಗಿರುವ ರೀತಿಯಲ್ಲಿ ಕೊರೊನಾ ಕುರಿತಾದ ಪಠ್ಯವನ್ನು ರಚನೆ ಮಾಡಿ ಶಾಲೆಗಳಿಗೆ ಪೂರೈಸುವಂತೆ ಸೂಚಿಸಲಾಗಿದೆ.

ಪಾಠ ಬೋಧನೆಯ ಕುರಿತು ಶಿಕ್ಷಕರಿಗೆ ತರಬೇತಿಯನ್ನು ನೀಡುವುದರ ಜೊತೆಗೆ ಕಡ್ಡಾಯವಾಗಿ ಪಠ್ಯಕ್ರಮದ ಒಂದು ಭಾಗವಾಗಿ ಕೋವಿಡ್ -19 ವಿಷಯವನ್ನು ಅಳವಡಿಸಿಕೊಳ್ಳಬೇಕು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಎಲ್ಲೆಡೆಯಲ್ಲಿಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಅಂತೆಯೇ ಶಾಲಾ ಆವರಣದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಲಿಕಾ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ರೀತಿಯಲ್ಲಿ ಕ್ರೀಯಾ ಯೋಜನೆ ರೂಪಿಸಲು ಸಚಿವರು ಸೂಚಿನೆ ನೀಡಿದ್ದಾರೆ.


ಲಾಕ್ ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಯೂ ಟ್ಯೂಬ್ ಚಾನೆಲ್ ಗಳ ಮೂಲಕ ಪಾಠಬೋಧನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕೂಡ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ 1 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ. ಎಲ್ಲಾ ತರಗತಿಗಳ ಎಲ್ಲಾ ಅಧ್ಯಾಯಗಳ ಪಾಠ ಬೋಧನೆಯನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಉತ್ತಮ ಶಿಕ್ಷಕರಿಂದ ಚಿತ್ರೀಕರಿಸಿ ಯೂ ಟ್ಯೂಬ್ ಚಾನೆಲ್ ನಲ್ಲಿ ಶಾಶ್ವತವಾಗಿ ವಿದ್ಯಾರ್ಥಿಗಳಿಗೆ ಲಭ್ಯವಿರುವಂತೆ ನೋಡಿಕೊಳ್ಳಲು ಪ್ಲ್ಯಾನ್ ರೂಪಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.

ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡ ಕೂಡಲೇ ಟಿಇಟಿ ಪರೀಕ್ಷಾ ದಿನಾಂಕವನ್ನೂ ಪ್ರಕಟಿಸುವ ಕುರಿತು ಕ್ರಮಕೈಗೊಳ್ಳಬೇಕು. ಅಲ್ಲದೇ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಅನುಮೋಧನೆಗೊಂಡ ವರ್ಗಾವಣಾ ಕಾಯ್ದೆಯ ನಿಯಮಗಳನ್ನು ಶೀಘ್ರದಲ್ಲಿಯೇ ರೂಪಿಸಿ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲು ಅಗತ್ಯಕ್ರಮಗಳನ್ನು ಕೈಗೊಳ್ಳುವಂತೆ ಸುರೇಶ್ ಕುಮಾರ್ ತನ್ನ ಆದೇಶದಲ್ಲಿ ಸೂಚಿಸಿದ್ದಾರೆ.