ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ರದ್ದಾಗಿರುವ ದ್ವಿತೀಯ ಪಿಯುಸಿ ಫಲಿತಾಂಶವನ್ನು ಜುಲೈ ಎರಡನೇ ವಾರದಲ್ಲಿ ಪ್ರಕಟಿಸಿಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಾರಿ ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟಿಸಲಾಗುತ್ತಿದೆ. ಒಂದೊಮ್ಮೆ ವಿದ್ಯಾರ್ಥಿಗಳಿಗೆ ಫಲಿತಾಂಶದಿಂದ ತೃಪ್ತಿ ಇಲ್ಲದಿದ್ದರೆ, ಅಂತಹ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯಲು ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಫಲಿತಾಂಶ ಪ್ರಕಟವಾದ ನಂತರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.
ಪಿಯುಸಿ ಫಲಿತಾಂಶದ ಕುರಿತು ಮೌಲ್ಯಾಂಕನ ಕೈಗೊಳ್ಳಲು 12 ಮಂದಿ ತಜ್ಞರ ಸಮಿತಿಯನ್ನು ನೇಮಕ ಮಾಡಲಾಗಿದೆ. ಸಮಿತಿಯು ನೀಡಿದ ಸಲಹೆಗಳ ಆಧಾರದ ಮೇಲೆಯೇ ಮೌಲ್ಯಾಂಕನವನ್ನು ನಡೆಸಲಾಗಿದೆ ಎಂದರು.
ರಾಜ್ಯದಲ್ಲಿ ಕೊರೊನಾ, ಡೆಲ್ಟಾ ಫ್ಲಸ್ ಸೋಂಕಿನ ನಡುವಲ್ಲೇ ಶಾಲೆ ಆರಂಭದ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ.ಇನ್ನೆರಡು ದಿನಗಳಲ್ಲಿ ಆರೋಗ್ಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗುವುದು. ಜುಲೈ ಒಂದರಿಂದ ಆನ್ಲೈನ್ ತರಗತಿ ಆರಂಭವಾಗಲಿದೆ ಎಂದರು. ಈ ಉದ್ದೇಶದಿಂದ ವಿಷಯ ಪರಿಣತರು, ತಾಂತ್ರಿಕ ಸಲಹೆ ಸಮಿತಿಯ ಸದಸ್ಯರು, ಮಕ್ಕಳ ತಜ್ಞರನ್ನು ಒಳಗೊಂಡ ಕಾರ್ಯಪಡೆಯನ್ನು ರಚನೆ ಮಾಡಲಾಗುವುದು. ಒಂದೆರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ.