ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಶಿಕ್ಷಣ ಇಲಾಖೆಯ ಆಯುಕ್ತರು ಕೂಡ ವರದಿಯೊಂದನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಆದ್ರೀಗ ಗೊಂದಲದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ.

ಹೊರ ರಾಜ್ಯಗಳಲ್ಲಿ ಶಾಲೆ, ಕಾಲೇಜುಗಳು ಆರಂಭವಾಗುತ್ತಿದ್ದಂತೆಯೇ ರಾಜ್ಯದಲ್ಲಿಯೂ ಕೂಡ ಶಾಲಾರಂಭ ಮಾಡಲು ಶಿಕ್ಷಣ ಇಲಾಖೆ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಮಾತ್ರವಲ್ಲ ಪೋಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಎಸ್ ಡಿಎಂಸಿ ಅಧ್ಯಕ್ಷರು, ಶಿಕ್ಷಣ ತಜ್ಞರು, ಆರೋಗ್ಯ ತಜ್ಞರ ಜೊತೆಗೆ ಚರ್ಚೆಯನ್ನು ನಡೆಸಿದ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬು ಕುಮಾರ್ ಸುದೀರ್ಘ ವರದಿಯೊಂದನ್ನು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಕೆಯನ್ನು ಮಾಡಿದ್ದರು.

ಇದರ ಬೆನ್ನಲ್ಲೇ ರಾಜ್ಯದಲ್ಲಿ ಶಾಲಾರಂಭದ ಕುರಿತು ಪರ ವಿರೋಧದ ಮಾತುಗಳು ಕೇಳಿಬಂದಿದ್ದವು. ಅದ್ರಲ್ಲೂ ಬಹುತೇಕ ಪೋಷಕರು ಶಾಲಾರಂಭಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಶಾಲಾರಂಭ ಮಾಡುವುದೇ ಆದರೆ ಹಲವು ನಿಯಮಗಳನ್ನು ಪಾಲಿಸುವಂತೆಯೂ ಕೆಲ ಪೋಷಕರು ಒತ್ತಾಯವನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೀಪಾವಳಿಯ ನಂತರದಲ್ಲಿ ರಾಜ್ಯದಲ್ಲಿ ಶಾಲಾರಂಭವಾಗಲಿದೆ ಅಂತಾ ಹೇಳಲಾಗುತ್ತಿತ್ತು. ಆದ್ರೀಗ ರಾಜ್ಯ ಸರಕಾರ ಶಾಲೆಗಳನ್ನು ಸದ್ಯಕ್ಕೆ ಆರಂಭಿಸದಿರಲು ತೀರ್ಮಾನಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಶಾಲೆಗಳನ್ನು ತೆರೆಯುವ ತೀರ್ಮಾನ ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೊರೊನಾ ವೈರಸ್ ಸೋಂಕಿನ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗುತ್ತಿದೆ. ಹೀಗಾಗಿ ಈಗಲೇ ಶಾಲೆಗಳನ್ನು ಆರಂಭಿಸುವುದು ಬೇಡ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಬಹುದೆಂದಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿ.ಎಂ.ಯಡಿಯೂರಪ್ಪ ಕೂಡ ಸದ್ಯಕ್ಕೆ ಶಾಲಾರಂಭ ಮಾಡುವುದು ಬೇಡ ಎಂದಿದ್ದಾರೆನ್ನಲಾಗುತ್ತಿದೆ.

ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಶಾಲಾರಂಭದ ಗೊಂದಲದಲ್ಲಿದ್ದ ಪೋಷಕರಿಗೆ ಇದೀಗ ರಾಜ್ಯ ಸರಕಾರ ರಿಲೀಫ್ ಕೊಟ್ಟಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದ್ರೆ ಮುಂದಿನ ವರ್ಷಾರಂಭದ ವರೆಗೂ ಶಾಲೆ ಆರಂಭವಾಗೋದು ಅನುಮಾನ.