ಮಂಡ್ಯ : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವಲ್ಲೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಸಪ್ಟೆಂಬರ್ ತಿಂಗಳಿನಿಂದ ಶಾಲೆ ಆರಂಭದ ಕುರಿತು ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಮಕ್ಕಳು ಗೊಂದಲಕ್ಕೀಡಾಗಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಶಾಲೆಗಳನ್ನು ಸಪ್ಟೆಂಬರ್ ತಿಂಗಳಿನಿಂದ ಆರಂಭ ಮಾಡುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಮಗೆ ನಮ್ಮ ಮಕ್ಕಳ ಆರೋಗ್ಯ ಮುಖ್ಯ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ನಾವು ನೋಡಬೇಕಾಗಿದೆ. ಜೊತೆಗೆ ನಮ್ಮ ಮಕ್ಕಳ ಕಲಿಕೆಯನ್ನು ಹೇಗೆ ಮುಂದುವರಿಸಬಹುದು ಅನ್ನುವುದಕ್ಕೆ ಈಗಾಗಲೇ ರಾಜ್ಯದಲ್ಲಿ ವಿದ್ಯಾಗಮ ಯೋಜನೆಯನ್ನು ಜಾರಿಗೆ ತರಲಾಗಿದೆ. ವಿದ್ಯಾಗಮ ಯೋಜನೆಯನ್ನು ಇಡೀ ರಾಷ್ಟ್ರವೇ ನೋಡುವಂತಹ ಅತ್ಯುತ್ತಮ ಯೋಜನೆಯಾಗಿದೆ. ಶಿಕ್ಷಕರು ಮಕ್ಕಳು ಇರುವಲ್ಲಿಗೆ ತೆರಳಿ ಮಕ್ಕಳ ಕಲಿಕೆಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.

ಅದ್ರಲ್ಲೂ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ದಿನಗಳು ಹೇಗೆ ಎಂದು ಯೋಚನೆ ಮಾಡುವಂತಾಗಿದ್ದು, ಈಗ ನಮ್ಮ ಮುಂದೆ ದೊಡ್ಡ ಸವಾಲು ಇದೆ. ಇನ್ನೊಂದೆಡೆ ಸುರೇಶ್ ಕುಮಾರ್ ಅವರು ಶಾಲೆಗಳನ್ನು ಪ್ರಾರಂಭಿಸಲು ತುದಿಗಾಲಿನಲ್ಲಿ ನಿಂತಿದ್ದಾರೆಂಬ ಬಿರುದನ್ನೂ ಕೊಟ್ಟಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸಪ್ಟೆಂಬರ್ ತಿಂಗಳಿನಿಂದ ಶಾಲೆಗಳನ್ನು ಆರಂಭ ಮಾಡುವುದೇ ಇಲ್ಲಾ ಎಂದಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೆಂಪ್ಪಯ್ಯನದೊಡ್ಡಿಯಲ್ಲಿ ಶಿಕ್ಷಕರು ಊರಿನ ಪಡಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಕೊರೋನಾ ಕಾಲದಲ್ಲಿ ಕೂಡ ನಮ್ಮ ಮಕ್ಕಳು ಯಾವುದೇ ಖಿನ್ನತೆಗೆ ಒಳಗಾಗಬಾರದು. ಅದಕ್ಕಾಗಿ ಅವರಿಗೆ ಕಲಿಕೆ ಮುಂದುವರಿಸಬೇಕು , ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗುವುದು ಬೇಡಾ ಎಂದು ತಿಳಿಸಿದರು.