ಬೆಂಗಳೂರು : ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ದೇಶದಲ್ಲೇ ಕರ್ನಾಟಕ ರಾಜ್ಯದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಎನ್ಇಪಿ-2019 ನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಿರುವ ಮೊದಲ ರಾಜ್ಯಗಳಲ್ಲಿ ಒಂದಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ನೂತನ ರಾಷ್ಟ್ರೀಯ ನೀತಿ ಅನುಮೋದನೆಗೊಂಡ ನಂತರ ಇಂದು ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷರಾದ ಡಾ. ಕೆ. ಕಸ್ತೂರಿರಂಗನ್ ಅವರೊಂದಿಗೆ ವೆಬಿನಾರ್ ಮೂಲಕ ಸಂವಾದ ನಡೆಸಿದ ಅವರು, ವಿವಿಧ ಸ್ತರಗಳ, ನಾನಾ ಅಂತರಗಳಿರುವ ಈ ರಾಷ್ಟ್ರದ ಎಲ್ಲರಿಗೂ ಅನ್ವಯವಾಗಬಹುದಾದ ನೂತನ ಶಿಕ್ಷಣ ನೀತಿಯ ನ್ನು ಶ್ರಮವಹಿಸಿ ರೂಪಿಸಿದ್ದಕ್ಕೆ ಕಸ್ತೂರಿರಂಗನ್ ಅವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸಿದ್ದಾರೆ

ಇದೇ ಫೆಬ್ರವರಿಯಲ್ಲಿ ಕರ್ನಾಟಕಕ್ಕೆ ವಿಶೇಷ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಲಾಗಿದ್ದು, ಈಗ ರೂಪುರೇಷೆ ಸಿದ್ಧಗೊಳಿಸಲಿದೆ. 15 ದಿನಗಳ ಅವಧಿಯಲ್ಲಿ ಕೇಂದ್ರದ ನೀತಿಯನ್ನು ಹಾಗೂ ರಾಜ್ಯದ ನೀತಿಯನ್ನು ಅಭ್ಯಸಿಸಿ ಕರ್ನಾಟಕದ ಶಿಕ್ಷಣ ನೀತಿಯನ್ನು ಹೊರತರಲು ಕ್ರಮ ವಹಿಸಬೇಕು. ಹಾಗೆಯೇ ಆಗಸ್ಟ್ 20ಕ್ಕೆ ಲೋಕಾರ್ಪಣೆ ಗೊಳಿಸುವ ಸಾಧ್ಯತೆಗಳ ಕುರಿತು ಆಲೋಚಿಸಬೇಕು ಎಂದು ಸುರೇಶ್ ಕುಮಾರ್ ಹೇಳಿದರು.
34 ವರ್ಷಗಳ ಬಳಿಕ ಇಂದಿನ ಹಾಗೂ ಭವಿಷ್ಯದ ಶೈಕ್ಷಣಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರ ನೀತಿಯಾಗಿದೆ. ಇದು ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸಲು ಶ್ರಮಿಸುವಂತಹ ಒಂದು ಗಟ್ಟಿಯಾದ ನೀತಿಯಾಗಿದೆ. ಇಂತಹ ನೀತಿಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ ಉತ್ಸುಕವಾಗಿದೆ ಎಂದು ಸಚಿವರು ಹೇಳಿದರು.

ಕೇರಳ ನನ್ನ ಜನ್ಮಭೂಮಿಯಾಗಿದ್ದರೂ ಕರ್ನಾಟಕ ನನ್ನ ಕರ್ಮಭೂಮಿ,ಕರ್ನಾಟಕ ನನ್ನ ರಾಜ್ಯ ಎಂದು ಹೆಮ್ಮೆಯಿಂದ ಹೇಳಿದ ಕಸ್ತೂರಿರಂಗನ್, ಭಾರತ ದೇಶ ವಿವಿಧ ರೀತಿಯ ಸಾಮಾಜಿಕ, ಭಾಷೆ, ಧರ್ಮ, ಸಂಸ್ಕೃತಿ, ಗ್ರಾಮೀಣ, ನಗರ, ಗುಡ್ಡಗಾಡು, ಅಭಿವೃದ್ಧಿ ಹೊಂದಿದ, ಹಿಂದುಳಿದ ಪ್ರದೇಶಗಳಂತಹ ಹಲವು ಸ್ತರಗಳ ಪ್ರದೇಶಗಳನ್ನೊಳಗೊಂಡಿದ್ದು,ಮುಂದಿನ 20 ವರ್ಷಗಳಲ್ಲಿ ದೇಶವು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ ಬಹುತೇಕ ಸಂಗತಿಗಳು ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಕೆ ಯಾಗಿದ್ದು,ಈ ಹೊಸ ನೀತಿಯಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ. ದೇಶದ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಜನಗಳನ್ನು ಪಡೆಯುವ ಮುನ್ನವೇ ದೂರದೃಷ್ಟಿಯ ಧ್ಯೇಯಗಳನ್ನು ಅಳವಡಿಸಿಕೊಂಡ ಕರ್ನಾಟಕ ಇತರೆ ರಾಜ್ಯಗಳಿಗಿಂತ ಮುಂದಿದೆ ಎಂದು ಹೇಳಿದ ಕಸ್ತೂರಿ ರಂಗನ್, ಸಮಿತಿ ಸದಸ್ಯರಾದ ಕರ್ನಾಟಕದವರೇ ಆದ ಪ್ರೊ. ಎಂ.ಕೆ. ಶ್ರೀಧರ್ ಅವರ ಸೇವೆಯನ್ನು ಶ್ಲಾಘಿಸಿದರು.

ಶಿಕ್ಷಣ ಸಮಿತಿ ರೂಪಿಸಿದ ಈ ವರದಿಯ ರೂಪುರೇಷೆ ಸಿದ್ಧಪಡಿಸಲು ಅವರ ಕೊಡುಗೆಯನ್ನು ಅತ್ಯಂತ ಖುಷಿಯಿಂದ ವಿವರಿಸಿ ಸಮಿತಿಯಲ್ಲಿ ಅತ್ಯಂತ ಕೇಂದ್ರೀಕೃತ ಪಾತ್ರ ನಿರ್ವಹಿಸಿದರು ಎಂದ ಅವರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶದಲ್ಲಿ ಶೈಕ್ಷಣಿಕ ಕ್ರಾಂತಿಯೇ ಆಗಲಿದ್ದು, ಅದು ಕರ್ನಾಟಕದಿಂದಲೇ ಆರಂಭವಾಗಲಿದೆ ಎಂಬ ನಂಬುಗೆ ನನ್ನದಾಗಿದೆ ಎಂದು ಕಸ್ತೂರಿರಂಗನ್ ಆಶಯ ವ್ಯಕ್ತಪಡಿಸಿದರು.