ಬೆಂಗಳೂರು : ಕೇಂದ್ರ ಸರಕಾರ ಅನ್ ಲಾಕ್ 5.0 ಮಾರ್ಗಸೂಚಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಕ್ಟೋಬರ್ 15ರಿಂದ ಶಾಲೆ, ಕಾಲೇಜು ಆರಂಭವಾಗಲಿದೆ ಎಂಬ ಗೊಂದಲಕ್ಕೆ ಸಚಿವ ಸುರೇಶ್ ಕುಮಾರ್ ತೆರೆ ಎಳೆದಿದ್ದಾರೆ.

ಕೇಂದ್ರ ಸರಕಾರ ಅಕ್ಟೋಬರ್ 15ರಿಂದ ಶಾಲೆ- ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರಕಾರ ಅನುಮತಿಯನ್ನು ನೀಡಿದ್ದು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಶಾಲೆಗಳನ್ನು ತೆರೆಯಬಹುದಾಗಿದೆ. ಆದರೆ ಹಾಜರಾತಿ ಕಡ್ಡಾಯವಲ್ಲ, ಪೋಷಕರ ಅನುಮತಿ ಇದ್ದರೆ ಮಾತ್ರವೇ ಮಕ್ಕಳು ಶಾಲೆಗೆ ಬರಬಹುದು.

ಶಾಲಾರಂಭದ ಕುರಿತು ಆಯಾಯ ಸರಕಾರಗಳು ನಿರ್ಧಾರ ಕೈಗೊಳ್ಳುವಂತೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿನ ನಡುವಲ್ಲಿಯೇ ಶಾಲೆಗಳು ಆರಂಭವಾಗಲಿದೆ ಎಂಬ ಗೊಂದಲ ಏರ್ಪಟ್ಟಿತ್ತು. ಆದ್ರೀಗ ಸಚಿವ ಸುರೇಶ್ ಕುಮಾರ್ ಶಾಲಾರಂಭದ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.

ಅಕ್ಟೋಬರ್ 15ರಿಂದ ಶಾಲೆಗಳನ್ನು ಆರಂಭಿಸುವ ಧಾವಂತ ರಾಜ್ಯ ಸರಕಾರಕ್ಕೆ ಇಲ್ಲ. ಪೋಷಕರ ಅಭಿಪ್ರಾಯವನ್ನು ಸರಕಾರ ಗೌರವಿಸಲಿದ್ದು, ಹಲವು ಬಾರಿ ಸಮಾಲೋಚನೆಯನ್ನು ನಡೆಸಿದ ಬಳಿಕವೇ ಶಾಲೆ ಹಾಗೂ ಕಾಲೇಜು ಆರಂಭದ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದಿದ್ದಾರೆ.

ಕೊರೊನಾ ಕಾಲದಲ್ಲಿ ಮಕ್ಕಳ ರಕ್ಷಣೆಯೇ ಮುಖ್ಯವಾಗಿದ್ದು, ಹೀಗಾಗಿ ಪರಿಶೀಲನೆ ನಡೆಸಿದ ಬಳಿಕೆವೇ ಶಾಲಾರಂಭದ ಕುರಿತು ತೀರ್ಮಾನಕೈಗೊಳ್ಳಲಾಗುತ್ತದೆ. ಹೀಗಾಗಿ ನವೆಂಬರ್ ಹಾಗೂ ಡಿಸೆಂಬರ್ ನಂತರವೇ ಆಗಬಹುದು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.