ಬೆಂಗಳೂರು : ರಾಜ್ಯದಲ್ಲಿ ಯುಕೆಜಿ, ಎಲ್ ಕೆಜಿ ಹಾಗೂ 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣವನ್ನು ರದ್ದು ಮಾಡಲಾಗಿದೆ ಎಂದು ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಆನ್ ಲೈನ್ ಶಿಕ್ಷಣದ ಕುರಿತು ನಿಮ್ಹಾನ್ಸ್ ವೈದ್ಯರು, ಶಿಕ್ಷಣ ತಜ್ಞರು, ಪೋಷಕರು ಹಾಗೂ ಶಾಲೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆನ್ ಲೈನ್ ಶಿಕ್ಷಣ ವನ್ನು ನಡೆಸುವಂತಿಲ್ಲ. ಮಾತ್ರವಲ್ಲ ಯಾವುದೇ ರೀತಿಯಲ್ಲಿಯೂ ಶುಲ್ಕವನ್ನು ಪಡೆಯುವಂತಿಲ್ಲ. ಒಂದೊಮ್ಮೆ ಆನ್ ಲೈನ್ ಶಿಕ್ಷಣದ ಹೆಸರಲ್ಲಿ ಶುಲ್ಕ ಪಡೆದರೆ ಅಂತಹ ಶಾಲೆಗಳ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇನ್ನು ಕೋವಿಡ್ -19 ಹಿನ್ನೆಲೆಯಲ್ಲಿ ಹಲವರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಜನರು ತುತ್ತಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಶಾಲೆಗಳು ಕೂಡ ಶುಲ್ಕವನ್ನು ಹೆಚ್ಚಿಸುವಂತಿಲ್ಲ. ಅಲ್ಲದೇ ಯಾವುದೇ ಶಾಲೆಯವರು ಶೇ.50ರಷ್ಟು ಶುಲ್ಕವನ್ನು ಪಡೆಯುವುದಾದ್ರೆ ಅದನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.

ರಜೆಯ ಕಾಲದಲ್ಲಿ ಮಕ್ಕಳ ಬೌದ್ದಿಕ ಬೆಳವಣಿಗೆಗೆ ವೃದ್ದಿಸುವ ನಿಟ್ಟಿನಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು. ಅಲ್ಲದೇ ಟೆಕ್ನಾಲಜಿಯನ್ನು ಶಿಕ್ಷಣದಲ್ಲಿ ಅಳವಡಿಸುವ ಕುರಿತು ಮಾರ್ಗಸೂಚಿಯನ್ನು ಸಿದ್ದಪಡಿಸುವ ಕುರಿತು ತಜ್ಞರ ಸಮಿತಿಯನ್ನು ರೂಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿನ ವಿದ್ಯಾರ್ಥಿಗಳು ಗ್ರಾಮೀಣ ಭಾಗದವರೇ ಆಗಿದ್ದಾರೆ. ಇಂತಹ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬೇಕು. ಈ ನಿಟ್ಟಿನಲ್ಲಿಯೂ ಸಮಿತಿ ಚಿಂತನೆಯನ್ನು ನಡೆಸಿ ಮಾರ್ಗಸೂಚಿಯನ್ನು ನೀಡಲಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.