ಭಾನುವಾರ, ಏಪ್ರಿಲ್ 27, 2025
Homeeducation'ಬೆಂಕಿಯಲ್ಲಿ ಅರಳಿದ ಹೂವು' : ಮಂಗಳೂರು ವಿವಿಯಲ್ಲಿ ಅವಳಿ ಚಿನ್ನದ ಪದಕ ಗೆದ್ದ ಸಾಧಕಿ

‘ಬೆಂಕಿಯಲ್ಲಿ ಅರಳಿದ ಹೂವು’ : ಮಂಗಳೂರು ವಿವಿಯಲ್ಲಿ ಅವಳಿ ಚಿನ್ನದ ಪದಕ ಗೆದ್ದ ಸಾಧಕಿ

- Advertisement -
  • ಎ. ಶೇಷಗಿರಿ ಭಟ್

ಬ್ರಹ್ಮಾವರ : ಆಕೆ ಹುಟ್ಟಿದ್ದು ಬಡಕುಟುಂಬದಲ್ಲಿ, ಬೆಳೆದಿದ್ದು ಬಡತನ ಬೇಗೆಯಲ್ಲಿ, ತಾಯಿಯ ದುಡಿಮೆಯಲ್ಲಿಯೇ ಪದವಿ ಶಿಕ್ಷಣ ಪಡೆದಿರುವ ಈಕೆ, ಇದೀಗ ಎಲ್ಲರೂ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾಳೆ. ವಿಶ್ವವಿದ್ಯಾಲಯದಲ್ಲಿ ಪ್ರಥಮ ರ್ಯಾಂಕ್ ಪಡೆದಿರುವುದು ಮಾತ್ರವಲ್ಲ, ಅವಳಿ ಚಿನ್ನದ ಪದಕ ಗೆಲ್ಲೋ ಮೂಲಕ ಸಾಧನೆಯ ಶಿಖರವೇರಿದ್ದಾಳೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೇರಂಜೆ ಅನ್ನೋ ಗ್ರಾಮದಲ್ಲಿ ಜನಿಸಿದ ಪೂಜಾ ಎಸ್. ಹುಟ್ಟಿ ಬೆಳೆದಿದ್ದು ಬಡತನದಲ್ಲಿ. ತಂದೆಯನ್ನು ಕಳೆದುಕೊಂಡ ಪೂಜಾಳಿಗೆ ತಾಯಿಯೆ ಎಲ್ಲವೂ ಆಗಿದ್ರು. ಕಷ್ಟಪಟ್ಟು ದುಡಿದು ಮಗಳಿಗೆ ವಿದ್ಯಾಭ್ಯಾಸವನ್ನು ನೀಡಿದ್ರು. ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ತುಡಿತ, ನಿರಂತರ ಪ್ರಯತ್ನ, ಸಾಧನೆಯ ಛಲದಿಂದಲೇ ಪೂಜಾ ಎಸ್. ಇಂದು ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾಳೆ. 2019ರಲ್ಲಿ ನಡೆದ ಬಿ.ಎ ಪದವಿ ಪರೀಕ್ಷೆಯಲ್ಲಿ ಶೇ.89.62 ಅಂಕ ಪಡೆದು ಪ್ರಥಮ ರಾಂಕ್ ಪಡೆದಿದ್ದರು, ಇದೀಗ ಮಂಗಳೂರು ವಿಶ್ವವಿದ್ಯಾನಿಲಯ ನೀಡುವ ಡಾ.ಟಿ.ಎಂ.ಎ.ಪೈ ಚಿನ್ನದ ಪದಕ ಹಾಗೂ ಡಾ.ಸಿ.ಟಿ.ಅಬ್ರಾಹಂ ಚಿನ್ನದ ಪದಕವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಬ್ರಹ್ಮಾವರ ಹಾರಾಡಿಯ ವಿದ್ಯಾಮಂದಿರದಲ್ಲಿ ಪ್ರಾಥಮಿಕ, ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಪಡೆದಿರೋ ಪೂಜಾ, ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿ ಈ ಸಾಧನೆ ಮಾಡಿದ್ದಾರೆ. ಬಿ.ಎ ಅಂತಿಮ ವರ್ಷದಲ್ಲಿ ನಡೆದ ಕ್ಯಾಂಪಸ್ ಆಯ್ಕೆಯಲ್ಲಿ ಐಸಿಐಸಿಐ ಬ್ಯಾಂಕ್ ನಲ್ಲಿ ಉದ್ಯೋಗಗಿಟ್ಟಿಸಿಕೊಂಡಿದ್ದಾರೆ. ಪ್ರಸ್ತುತ ಐಸಿಐಸಿಐ ಬ್ಯಾಂಕಿನ ಮಂಗಳೂರು ಶಾಖೆಯಲ್ಲಿ ಬ್ರಾಂಚ್ ರಿಲೇಶನ್ ಆಫೀಸರ್ ಆಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲ, ಭರತನಾಟ್ಯ, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿಯೂ ಪೂಜಾ ಅದ್ವೀತಿಯಾ ಸಾಧನೆ ಮಾಡಿದ್ದಾರೆ. ಸಾಲಿಗ್ರಾಮದ ಗೀತಾ ತುಂಗಾ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿ ಹಲವು ಕಡೆಗಳಲ್ಲಿ ಸಂಗೀತ ಕಾರ್ಯಗಳನ್ನು ನೀಡಿದ್ದಾರೆ. ಸುಮಾರು 6 ವರ್ಷಗಳ ಕಾಲ ವಿದುಷಿ ನಾಗಶ್ರೀ ಅವರಲ್ಲಿ ಭರತ ನಾಟ್ಯವನ್ನು ಕಲಿತಿರೋ ಪೂಜಾ, ಉಡುಪಿಯ ಕೃಷ್ಣ ಮಠದ ರಾಜಾಂಗಣ ಸೇರಿದಂತೆ ಹಲವು ಕಡೆಗಳಲ್ಲಿ ನಾಟ್ಯ ಕಾರ್ಯಕ್ರಮವನ್ನು ನೀಡಿದ್ದಾರೆ.

ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುವ ವೇಳೆಯಲ್ಲಿಯೇ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡಿರೋ ಪೂಜಾ ಹೆರಂಜೆ, ಚಾಂತಾರು, ಕುಂಜಾಲು, ಕೊಕ್ಕರ್ಣೆ, ಹಾರಾಡಿ ಮುಂತಾದ ಗ್ರಾಮೀಣ ಭಾಗದ ಮಕ್ಕಳಿಗೆ ಸಂಗೀತ ಮತ್ತು ನೃತ್ಯವನ್ನು ಉಚಿತವಾಗಿ ಕಲಿಸಿಕೊಡುತ್ತಿದ್ದಾರೆ. ಪ್ರತಿಭಾ ಕಾರಂಜಿ, ಕೋಲಾಟ, ಭಾವಗೀತೆ, ಜಾನಪದ ಗೀತೆ, ಅಭಿನಯ ಗೀತೆಗಳಲ್ಲಿಯೂ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಬ್ರಹ್ಮಾವರ ಹೆರಂಜೆಯ ಶಶಿಕಲಾ ಅವರ ಪುತ್ರಿಯಾಗಿರೋ ಪೂಜಾ ಎಂಬಿಎ ಮಾಡೋ ಕನಸು ಹೊತ್ತಿದ್ದಾಳೆ. ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದು ಕೂಡ ಶೈಕ್ಷಣಿಕವಾಗಿ ಸಾಧನೆ ಮಾಡಬಹುದು ಅನ್ನೋದನ್ನು ಪೂಜಾ ತೋರಿಸಿಕೊಟ್ಟಿದ್ದಾಳೆ. ತನ್ನ ಸಾಧನೆಗೆ ತಾಯಿಯೇ ಸ್ಪೂರ್ತಿ ಅನ್ನೊ ಪೂಜಾ, ತನಗೆ ವಿದ್ಯಾಭ್ಯಾಸವನ್ನು ಕೊಟ್ಟ ಕ್ರಾಸ್ ಲ್ಯಾಂಡ್ ಕಾಲೇಜು ಹಾಗೂ ಕಾಲೇಜಿನ ಉಪನ್ಯಾಸಕರನ್ನು ಮರೆಯುವುದಿಲ್ಲ. ಮೂರು ವರ್ಷದ ಅವಧಿಯಲ್ಲಿ ಉಪನ್ಯಾಸಕಿ ಜ್ಯೋತಿ ಮೇಡಮ್ ಅವರು ಉಚಿತವಾಗಿ ಪುಸ್ತಕವನ್ನು ನೀಡಿ, ತನ್ನ ವಿದ್ಯಾಭ್ಯಾಸ ಅರ್ಧ ಖರ್ಚನ್ನು ಭರಿಸಿದ್ದಾರೆ ಅವರಿಗೆ ನಾನೆಂದೂ ಆಬಾರಿಯಾಗಿದ್ದಾರೆ. ಜೊತೆಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸ್ಯಾಮುವೆಲ್ ಸರ್, ರಾಬರ್ಟ್ ಕ್ಲೈವ್ ಸರ್ ಅವರ ಸ್ಪೂರ್ತಿಯೇ ನಾನಿಂದು ಇಂತಹ ಸಾಧನೆ ಮಾಡೋದಕ್ಕೆ ಸಾಧ್ಯವಾಗಿದೆ ಎನ್ನುತ್ತಾರೆ.

ಕಾಲೇಜು ತನಗೆ ಎಲ್ಲವನ್ನೂ ಕೊಟ್ಟಿದೆ. ಕಾಲೇಜು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದಲೇ ನಾನಿಂದು ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. ಕ್ರಾಸ್ ಲ್ಯಾಂಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಕ್ಕೆ ಹೆಮ್ಮೆಯೆನಿಸುತ್ತಿದೆ ಎನ್ನುತ್ತಾರೆ ಪೂಜಾ.
ಬಡತನದಲ್ಲಿಯೇ ಬೆಂದು ಪೂಜಾ ಮಾಡಿದ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ತಾಯಿ ಹಾಗೂ ತಮ್ಮನೊಂದಿಗೆ ಜೀವನ ಸಾಗಿಸುತ್ತಿರೊ ಪೂಜಾ ಇನ್ನಷ್ಟು ಸಾಧನೆಗಳನ್ನು ಮಾಡಲಿ, ಉದ್ಯೋಗ ಮಾಡುತ್ತಲೇ ಸ್ಮಾತಕೋತ್ತರ ಪದವಿ ಪಡೆಯುವ ಕನಸು ನನಸಾಗಲಿ ಅನ್ನೋದು ನಮ್ಮ ಆಶಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular