ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಮುಕ್ತಾಯವಾದ ಬೆನ್ನಲ್ಲೇ ನಾಳೆಯಿಂದ ರಾಜ್ಯಾದ್ಯಂತ ಮೌಲ್ಯಮಾಪನ ಕಾರ್ಯ ನಡೆಯಲಿದೆ ಎಂದು ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ದ್ವಿತೀಯ ಪಿಯುಸಿಯ ೊಟ್ಟು 39 ವಿಷಯಗಳ ಪೈಕಿ ಈಗಾಗಲೇ 26 ವಿಷಯಗಳ ಮೌಲ್ಯ ಮಾಪನ ಕಾರ್ಯವನ್ನು ಈಗಾಗಲೇ ಯಶಸ್ವಿಯಾಗಿ ಮುಗಿಸಲಾಗಿದೆ. ಅಲ್ಲದೇ 6 ವಿಷಯಗಳ ಮೌಲ್ಯ ಮಾಪನ ಕಾರ್ಯ ಆರಂಭವಾಗಿದ್ದು, ಮುಕ್ತಾಯದ ಹಂತದಲ್ಲಿದೆ, ಉಳಿದಂತೆ ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ, ಸಂಖ್ಯಾ ಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಹಾಗೂ ಇಂಗ್ಲೀಷ್ ವಿಷಯಗಳ ಮೌಲ್ಯ ಮಾಪನ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ. ಇಂಗ್ಲೀಷ್ ವಿಷಯದ ಮೌಲ್ಯ ಮಾಪನವನ್ನು ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಆದಷ್ಟು ಶೀಘ್ರದಲ್ಲಿ ಮೌಲ್ಯಮಾಪನ ಕಾರ್ಯವನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಮೌಲ್ಯ ಮಾಪಕರಿಗೆ ನೀಡುತ್ತಿದ್ದ ಮೌಲ್ಯ ಮಾಪನ ಭತ್ಯೆ ಇಷ್ಟು ವರ್ಷ ವಿಳಂಭವಾಗುತ್ತಿತ್ತು. ಆದರೆ ಈ ಬಾರಿ ಆ ಸಮಸ್ಯೆಯನ್ನು ಪರಿಹಾರ ಮಾಡಲಾಗಿದ್ದು, ಮೊದಲ ಹಂತದ ಮೌಲ್ಯ ಮಾಪನ ಭತ್ಯೆಯನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ಮೌಲ್ಯ ಮಾಪನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ವಿನಂತಿ ಮಾಡಿದ್ದಾರೆ.