ಕೊಳ್ಳೇಗಾಲ : 2019-20ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಅಗಸ್ಟ್ 6 ಅಥವಾ 8ರಂದು ಪ್ರಕಟವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೊರೊನಾ ಆತಂಕದ ನಡುವಲ್ಲಿಯೇ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ನಡೆಸಲಾಗಿದೆ. ಈ ಬಾರಿಯ ಪರೀಕ್ಷೆಯಲ್ಲಿ ಬರೋಬ್ಬರಿ 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಜುಲೈ 3ರಂದು ಎಸ್ಎಸ್ಎಲ್ ಸಿ ಪರೀಕ್ಷೆ ಮುಕ್ತಾಯಗೊಂಡಿತ್ತು.

ಈಗಾಗಲೇ ಎಸ್ಎಸ್ಎಲ್ ಸಿ ಮೌಲ್ಯಮಾಪನ ಕಾರ್ಯ ಆರಂಭಗೊಂಡಿದ್ದು, ಬಹುತೇಕ ಕಾರ್ಯ ಮುಕ್ತಾಯಗೊಂಡಿದೆ. ಕೊರೊನಾ ಸೋಂಕಿನ ಲಾಕ್ ಡೌನ್ ನಡುವಲ್ಲೇ ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಿದ್ದಾರೆ. ಬಹುತೇಕ ವಿಷಯಗಳ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ಅಗಸ್ಟ್ 6 ಅಥವಾ ಅಗಸ್ಟ್ 8 ರಂದು ಫಲಿತಾಂಶ ಹೊರಬೀಳಲಿದೆ.

ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವ ನಿಟ್ಟಿನಲ್ಲಿಯೂ ಕ್ರಮಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎಂದಿದ್ದಾರೆ.

ಸಾಮಾನ್ಯವಾಗಿ ಶೈಕ್ಷಣಿಕ ವರ್ಷದಲ್ಲಿ ಸುಮಾರು 240 ದಿನಗಳ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ವೈರಸ್ ಸೋಂಕು ಹರಡುವಿಕೆಯ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದ ಆರಂಭದ ಬಗ್ಗೆಯೇ ಅನಿಶ್ಚಿತತೆಯಿದೆ. ಅದ್ರಲ್ಲೂ ಈ ಬಾರಿ ಕೇವಲ 120 ರಿಂದ 140 ದಿನಗಳ ಕಾಲ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಲಭ್ಯವಾಗುವ ಶಾಲಾ ದಿನಗಳ ಆಧಾರದ ಮೇಲೆ ಪಠ್ಯ ಕ್ರಮದಲ್ಲಿ ಶೇ.30ರಷ್ಟು ಪಾಠಗಳನ್ನು ಕಡಿತ ಮಾಡಲಾಗಿದೆ. ಶಿಕ್ಷಣ ತಜ್ಞರ ಸಮಿತಿ ಪಠ್ಯ ಕಡಿತ ಮಾಡಿರುವುದು ಕೆಲವರಿಗೆ ನೋವಾಗಿರಬಹುದು. ಮಾಧ್ಯಮಗಳು ಕೂಡ ಈ ಕುರಿತು ಸುದ್ದಿಯನ್ನು ಪ್ರಸಾರ ಮಾಡಿವೆ. ಹೀಗಾಗಿ ಸದ್ಯಕ್ಕೆ ಪಠ್ಯವನ್ನು ಕೈ ಬಿಡುವ ವಿಚಾರವನ್ನು ತಡೆಹಿಡಿದಿದ್ದೇವೆ. ವೈಜ್ಞಾನಿಕ ಆಧಾರದ ಮೇಲೆ ಯಾವ ರೀತಿ ಮಾಡಬೇಕೆಂದು ನಿರ್ಧಾರ ಮಾಡುವುದಾಗಿ ಸುರೇಶ್ ಕುಮಾರ್ ತಿಳಿಸಿದ್ದಾರೆ.