ಬೆಂಗಳೂರು : ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭಕ್ಕಿನ್ನು ನಾಲ್ಕು ದಿನಗಳಷ್ಟೇ ಬಾಕಿ ಉಳಿದಿದೆ. ಶಿಕ್ಷಣ ಇಲಾಖೆ ಪರೀಕ್ಷೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ನಡೆಯುತ್ತೋ ಇಲ್ಲವೋ ಅಂತಾ ಶಿಕ್ಷಕರನ್ನು ಪ್ರಶ್ನಿಸುತ್ತಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿ ಆರ್ಭಟ ದಿನಕಳೆದಂತೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ನಿತ್ಯವೂ 200 ರಿಂದ 400 ರಷ್ಟು ಮಂದಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ನಡುವಲ್ಲೇ ರಾಜ್ಯ ಸರಕಾರ ಜೂನ್ 25 ರಿಂದ ಜುಲೈ4 ರವರೆಗೆ ರಾಜ್ಯದಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ತೆಲಂಗಾಣ, ತಮಿಳುನಾಡು ಸರಕಾರ ಈಗಾಗಲೇ ಎಸ್ಎಸ್ಎಲ್ ಸಿ ಪರೀಕ್ಷೆಯನ್ನೇ ರದ್ದು ಮಾಡಿವೆ. ಇನ್ನು ಆಂಧ್ರಪ್ರದೇಶ ಸರಕಾರ ಕೂಡ ನಿನ್ನೆಯಷ್ಟೇ ಪರೀಕ್ಷೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಈ ನಡುವಲ್ಲೇ ರಾಜ್ಯದಲ್ಲಿಯೂ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಹಲವರು ಆಗ್ರಹಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪರೀಕ್ಷೆಯನ್ನು ರದ್ದು ಮಾಡುವಂತೆ ಶಿಕ್ಷಣ ಸಚಿವರಿಗೆ ಹಲವು ಮನವಿ ಮಾಡುತ್ತಿದ್ದಾರೆ. ಒಂದೆಡೆ ಕೊರೊನಾ ಸೋಂಕು ಇನ್ನೊಂದೆಡೆ ಪರೀಕ್ಷೆಯ ಕುರಿತಾದ ಹಲವು ಬೆಳವಣಿಗೆಗಳು ವಿದ್ಯಾರ್ಥಿಗಳನ್ನು ನಿಜಕ್ಕೂ ಗೊಂದಲಕ್ಕೀಡು ಮಾಡಿದೆ. ಪರೀಕ್ಷೆಗೆ ಕೇವಲ 4 ದಿನಗಳು ಬಾಕಿ ಉಳಿದಿದ್ದರೂ ಹಲವು ವಿದ್ಯಾರ್ಥಿಗಳು ಮಾತ್ರ ಕೊನೆಯಗಳಿಗೆಯಲ್ಲಿ ಪರೀಕ್ಷೆ ರದ್ದಾಗಬಹುದು ಅನ್ನೋ ಲೆಕ್ಕಾಚಾರದಲ್ಲಿಯೇ ಇದ್ದಂತೆ ಭಾಸವಾಗುತ್ತಿದೆ.

ಜೂನ್ 25 ರಂದು ನಡೆಯಲಿರುವ ಎಸ್ಎಸ್ಎಲ್ ಸಿ ಪರೀಕ್ಷೆಗಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ವಿತರಿಸಲಾಗುತ್ತಿದೆ. ಪ್ರವೇಶ ಪತ್ರಗಳನ್ನು ಶಿಕ್ಷಕರು ವಿದ್ಯಾರ್ಥಿಗಳ ಕೈಗಿಟ್ಟು ಚೆನ್ನಾಗಿ ಪರೀಕ್ಷೆ ಬರೆಯುವಂತೆ ಹೇಳುತ್ತಿದ್ರೆ, ಇತ್ತ ವಿದ್ಯಾರ್ಥಿಗಳು ನಿಜಕ್ಕೂ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಾ ಅಂತಾ ಪ್ರಶ್ನಿಸುತ್ತಿದ್ದಾರಂತೆ. ಒಂದೊಂದೆ ರಾಜ್ಯಗಳಲ್ಲಿ ಪರೀಕ್ಷೆಗಳು ರದ್ದಾಗಿವೆ.ನಮ್ಮ ರಾಜ್ಯದಲ್ಲಿಯೂ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಪರೀಕ್ಷೆಯನ್ನು ರದ್ದು ಮಾಡಬಹುದು ಅಲ್ವಾ ಅಂತಾ ಶಿಕ್ಷಕರನ್ನೇ ಕೇಳುತ್ತಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದಾಗಿ ವಿದ್ಯಾರ್ಥಿಗಳಿಗೆ ಒಂದೆಡೆ, ಭಯ ಇನ್ನೊಂದೆಡೆ ಗೊಂದಲವೂ ಇದೆ. ಎಸ್ಎಸ್ಎಲ್ ಸಿ ಪರೀಕ್ಷೆಯ ರದ್ದುಕೋರಿ ನ್ಯಾಯಾಲಯದ ಮೆಟ್ಟಿಲೇರಿರುವುದು ಇರ್ತರ್ಥವಾದ ಬೆನ್ನಲ್ಲೇ, ಶಿಕ್ಷಣ ಸಚಿವರ ವಿರುದ್ದ ಪೊಲೀಸರಿಗೆ ದೂರು ನೀಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ವಿದ್ಯಾರ್ಥಿಗಳ ಮೇಲೆ ನೇರ ಪರಿಣಾಮವನ್ನು ಬೀರಿದೆ.

ಡೆಡ್ಲಿ ಮಹಾಮಾರಿಯ ಆರ್ಭಟದ ನಡುವಲ್ಲೇ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ನಡೆಸಲು ಹೊರಟಿರುವ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯವನ್ನು ತುಂಬಬೇಕಿದೆ. ಕೊರೊನಾ ಸೋಂಕಿನ ನಡುವಲ್ಲೇ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕೈಗೊಂಡಿರುವ ಕ್ರಮವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕಿದೆ.