ಬೆಂಗಳೂರು : ಮಹಾಮಾರಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಸೆಪ್ಟಂಬರ್‌ವರೆಗೂ ಶಾಲೆಗಳು ಪ್ರಾರಂಭವಾಗುವುದಿಲ್ಲ. ಶಾಲೆಗಳನ್ನು ಪುನರ್ ಆರಂಭ ಮಾಡುವ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಶಾಲೆಗಳ ಆರಂಭದ ಕುರಿತು ಸಾಕಷ್ಟು ಗೊಂದಲಕಾರಿ ಸುದ್ದಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸುರೇಶ್ ಕುಮಾರ್ ಅವರು, ಸೆಪ್ಟೆಂಬರ್‌ನಲ್ಲಿ ಶಾಲೆ ಪ್ರಾರಂಭವಾಗುತ್ತೆಂಬ ಕುರಿತು ರಾಜ್ಯ ಸರಕಾರ ಯಾವುದೇ ನಿರ್ಣಯವನ್ನು ವ್ಯಕ್ತಪಡಿಸಿಲ್ಲ. ಕೊರೊನಾ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಆದ್ಯತೆಗಳು ಬೇರೆಯಿದ್ದು, ಅವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ತನ್ನನ್ನು ತೊಡಗಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ವರ್ಷದ ಶೈಕ್ಷಣಿಕ ಋತುವಿನಲ್ಲಿ ಇ-ಕ್ಲಾಸ್ ಹಾಗೂ ಆನ್‍ಲೈನ್ ಕ್ಲಾಸ್ ಮಾತ್ರನಾ ಅಂತ ಬಹುತೇಕ ಪೋಷಕರು ಪ್ರಶ್ನಿಸುತ್ತಿದ್ದಾರೆ. ಆದರೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಶಾಲೆಗಳ ಓಪನ್ ಆಗುವ ಸಾಧ್ಯತೆ ಕಡಿಮೆ ಇದೆ. ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದೇ ಮುಕ್ತ ವಾತಾವರಣದ ಸೃಷ್ಟಿಯಾದ ಮೇಲೆ ಮಾತ್ರ ಶಾಲೆಗಳಿಗೆ ಹಾಜರಾಗುತ್ತಾರೆ. ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಬಗ್ಗೆ ನಾವು ಯಾವುದೇ ಯೋಚನೆ, ನಿರ್ಣಯ ಕೈಗೊಂಡಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನವಶ್ಯಕ ಆತಂಕ ಬೇಡ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಂದಿನಿಂದ ಚಂದನ ವಾಹಿನಿಯಲ್ಲಿ 8-10ನೇ ತರಗತಿವರೆಗಿನ ಪಾಠಗಳು ಪ್ರಸಾರವಾಗಲಿದ್ದು, ಜುಲೈ 20 ರಿಂದ 31ರ ವರೆಗೆ ಬ್ರಿಡ್ಜ್ ಕೋರ್ಸ್ ನಡೆಯಲಿದ್ದು, ಈಗಾಗಲೇ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.