ಬೆಂಗಳೂರು : ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಒಂದೆಡೆ ಶಿಕ್ಷಕರನ್ನು ಸರಕಾರ ಕೊರೊನಾ ವಾರಿಯರ್ಸ್ ಆಗಿ ದುಡಿಸಿಕೊಳ್ಳುತ್ತಿದೆ. ಇನ್ನೊಂದಡೆ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯನ್ನು ಜಾರಿಗೆ ತರಲು ಹೊರಟಿದೆ. ಈ ನಡುವಲ್ಲೇ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವುದು ಶಿಕ್ಷಕ ಸಮುದಾಯವನ್ನೇ ಕಂಗೆಡಿಸಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಈಗಾಗಲೇ 2 ಲಕ್ಷದ ಅಂಚಿಗೆ ಬಂದು ನಿಂತಿದೆ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರು, ಬಳ್ಳಾರಿ, ದಕ್ಷಿಣ ಕನ್ನಡ, ಉಡುಪಿ, ಕಲಬುರಗಿ, ಧಾರವಾಡ, ಮೈಸೂರು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ 5 ಸಾವಿರಕ್ಕೂ ಅಧಿಕವಾಗಿದೆ. ಇನ್ನೂ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಿದ್ದಾರೆ. ಈ ನಡುವಲ್ಲೇ ರಾಜ್ಯದಲ್ಲಿ ಈಗಾಗಲೇ ಬೆಂಗಳೂರು. ಸಂಡೂರು, ಗಂಗಾವತಿ, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಈಗಾಗಲೇ 6 ಕ್ಕೂ ಅಧಿಕ ಶಿಕ್ಷಕರು ಕೊರೊನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.

ಕೊರೊನಾ ಸೋಂಕಿನ ನಡುವಲ್ಲೇ ಕರ್ತವ್ಯ ನಿರ್ವಹಣೆ ಮಾಡಲು ಸೂಚಿಸುವ ಸರಕಾರ ಶಿಕ್ಷಕ ಸಮುದಾಯವನ್ನು ಕೊರೊನಾ ವೈರಸ್ ಸೋಂಕಿನ ತಪಾಸಣೆಗೆ ಒಳಪಡಿಸಿಲ್ಲ. ಕೊರೊನಾ ಭೀತಿಯ ನಡುವಲ್ಲೇ ಶಿಕ್ಷಕರು ಎಸ್ಎಸ್ಎಸ್ ಸಿ ಪರೀಕ್ಷೆಯನ್ನು ರಾಜ್ಯದಲ್ಲಿ ನಡೆಸಿದ್ದು, ಮೌಲ್ಯ ಮಾಪನವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಸಾಲದಕ್ಕೇ ನೂರಕ್ಕೂ ಅಧಿಕ ಶಿಕ್ಷಕರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಇಷ್ಟಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಶಿಕ್ಷಕರ ಜೀವದ ಜೊತೆಗೆ ಚೆಲ್ಲಾಟವಾಡುವುದನ್ನು ನಿಲ್ಲಿಸುವಂತೆ ಕಾಣಿಸುತ್ತಿಲ್ಲ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿದೆ. ಕೊರೊನಾ ಸೋಂಕಿನ ಆರ್ಭಟ ಹೆಚ್ಚುತ್ತಿದ್ದಂತೆಯೇ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಚೆಕ್ ಪೋಸ್ಟ್ ಡ್ಯೂಟಿ, ಹೆಲ್ತ್ ವಾಚ್, ಮನೆ ಮನೆ ಸರ್ವೆ ಸೇರಿದಂತೆ ಹಲವು ಕಾರ್ಯಕ್ಕೆ ಬಳಕೆ ಮಾಡಲಾಗಿದೆ. ಈ ನಡುವಲ್ಲೇ ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಇದೇ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ರೆಡ್ ಝೋನ್ ಗಳಲ್ಲಿರುವ ಜಿಲ್ಲೆಗಳಲ್ಲಿ ಶೇ.50ರಷ್ಟು ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ.

ಎರಡು ವಿಭಾಗಗಳಲ್ಲಿ ಶಿಕ್ಷಕರನ್ನು ಪ್ರತ್ಯೇಕಿಸಲಾಗುತ್ತಿದ್ದು, ಪ್ರಾಥಮಿಕ ಸಂಪರ್ಕಿತರನ್ನು ಶಿಕ್ಷಕರನ್ನು ಮೊಬೈಲ್ ಮೂಲಕ ಪತ್ತೆ ಹಚ್ಚಿದ್ರೆ, ದ್ವಿತೀಯ ಸಂಪರ್ಕಿತರನ್ನು ಕೊರೊನಾ ಸೋಂಕಿತರ ಮನೆಗೆ ತೆರಳಿ ಪತ್ತೆ ಹಚ್ಚುವ ಅವೈಜ್ಞಾನಿಕ ಕಾರ್ಯಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಮನೆಗೆ ತೆರಳುವ ಶಿಕ್ಷಕರಿಗೆ ಕೇವಲ ಮಾಸ್ಕ್ ಒದಗಿಸುವುದಾಗಿ ಜಿಲ್ಲಾಡಳಿತಗಳು ಹೇಳಿವೆಯಾದ್ರೂ ಶಿಕ್ಷಕರಿಗೆ ಪಿಪಿಇ ಕಿಟ್, ಸ್ಯಾನಿಟೈಸರ್ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನೇ ನೀಡಿಲ್ಲ.
ಸರಕಾರದ ಸಂಬಳ ಪಡೆಯುವ ಶಿಕ್ಷಕರು ಕಡ್ಡಾಯವಾಗಿ ಕೆಲಸ ಮಾಡಲೇಬೇಕು. ಸೋಂಕಿಗೆ ತುತ್ತಾಗಿ ಬಲಿಯಾದ್ರೆ ವಿಮೆ ನೀಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಈ ಮೂಲಕ ಸರಕಾರ ಪರೋಕ್ಷವಾಗಿ ಶಿಕ್ಷಕರನ್ನು ಕೊರೊನಾ ಸೋಂಕಿಗೆ ಬಲಿಕೊಡಲು ಹೊರಟಂತಿದೆ. ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಆಗಿ ದುಡಿಸಿಕೊಳ್ಳುವ ಸರಕಾರ, ಜಿಲ್ಲಾಡಳಿತಗಳಿಗೆ ಕನಿಷ್ಠ ರಕ್ಷಣಾ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದಿರುವುದು ವಿಪರ್ಯಾಸ ಅಂತಿದ್ದಾರೆ ನೋಂದ ಶಿಕ್ಷಕರು.

ಒಂದೆಡೆ ಕೊರೊನಾ ವಾರಿಯರ್ಸ್ ಡ್ಯೂಟಿಯಾದ್ರೆ ಇನ್ನೊಂದೆಡೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವಿದ್ಯಾಗಮ ಯೋಜನೆಯನ್ನು ಜಾರಿಗೆ ತರೋದಕ್ಕೆ ಹೊರಟಿದ್ದಾರೆ. ಬೆಳಗ್ಗೆ 9 ಗಂಟೆಗೆ ಮೊದಲು ಮಕ್ಕಳಿಗೆ ಕರೆ ಮಾಡಿ ಮಾತನಾಡಬೇಕು. ಅಲ್ಲದೇ ಸಂಜೆ 5.30ರ ನಂತರ ವಿದ್ಯಾರ್ಥಿಗಳ ಜೊತೆಗೆ ಸಂಪರ್ಕ ಸಾಧಿಸಬೇಕು. ನಡುವಲ್ಲೇ ಚಂದನ ವಾಹಿನಿಯಲ್ಲಿ ಬರುವ ಪಾಠವನ್ನು ಕೇಳಿ ವಿದ್ಯಾರ್ಥಿಗಳನ್ನ ಶಿಕ್ಷಣ ಪಡೆಯಲು ಉತ್ತೇಜಿಸಬೇಕು ಅನ್ನೋದು ವಿದ್ಯಾಗಮ ಯೋಜನೆಯ ಮೂಲ ಉದ್ದೇಶ. ಆದರೆ ಕನಿಷ್ಠ ವಾರದಲ್ಲೊಮ್ಮೆಯಾದ್ರೂ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠಗಳ ಮನನ ಮಾಡುವುದು, ವಿದ್ಯಾರ್ಥಿಗಳಿಗೆ ಮನೆ ಪಾಠ ಹೇಳುವಂತೆ ಸೂಚನೆಯನ್ನು ಕೊಟ್ಟಿದೆ. ಆದರೆ ಮನೆ ಮನೆಗೆ ತೆರಳುವ ಶಿಕ್ಷಕರಿಗೆ ಯಾವ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಅನ್ನೋದನ್ನು ಶಿಕ್ಷಣ ಇಲಾಖೆ ಹೇಳಿಲ್ಲ.

ಶಿಕ್ಷಣ ಸಚಿವರು ತಾವು ಹೊರಡಿಸುವ ಆದೇಶವನ್ನು ಶಿಕ್ಷಕರು ಪಾಲಿಸಲೇ ಬೇಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ. ಒಂದೊಮ್ಮೆ ವಿದ್ಯಾರ್ಥಿಗಳ ಮನೆಗೆ ಹೋಗುವ ಶಿಕ್ಷಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ್ರೆ, ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಕೊರೊನಾ ಹೆಮ್ಮಾರಿಯನ್ನು ಹರಡಿದಂತಾಗುತ್ತದೆ. ಅಷ್ಟೇ ಯಾಕೆ ಕೊರೊನಾ ವಾರಿಯರ್ಸ್ ಡ್ಯೂಟಿ ಮಾಡಿದ ಶಿಕ್ಷಕರನ್ನೇ ವಿದ್ಯಾಗಮ ಯೋಜನೆಗೂ ನಿಯೋಜನೆಯನ್ನು ಮಾಡಿದ್ರೆ ಅನಾಹುತ ಎದುರಾಗೋದು ಗ್ಯಾರಂಟಿ. ಆದರೆ ಇದ್ಯಾವುದರ ಅರಿವೇ ಇಲ್ಲದಂತೆ ಎಸಿ ರೂಂ ಅಲ್ಲಿ ಕುಳಿತ ಅಧಿಕಾರಿಗಳು ಮನಸಿಗೆ ಬಂದಂತೆ ಆದೇಶ ಹೊರಡಿಸುತ್ತಿದ್ದಾರೆ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಕೊರೊನಾ ಸಮಯದಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಬೇಕೆಂಬ ಕುರಿತು ಶಿಕ್ಷಣ ಸಚಿವರಾಗಲಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗಾಗಲಿ ಸ್ಪಷ್ಟನೆಯಿಲ್ಲ. ವಿದ್ಯಾಗಮ ಯೋಜನೆಯ ಜೊತೆಗೆ ಕೊರೊನಾ ಡ್ಯೂಟಿಯನ್ನೂ ಶಿಕ್ಷಕರು ಮಾಡಬೇಕಾ ಅನ್ನು ಕುರಿತು ಶಿಕ್ಷಣ ಇಲಾಖೆ ಮಾಹಿತಿಯನ್ನು ನೀಡಿಲ್ಲ. ಮನೆಯಲ್ಲಿಯೇ ಕುಳಿತು ಮಾಡಬಹುದಾದ ವಿದ್ಯಾಗಮ ಯೋಜನೆಯನ್ನು ಮನೆಯಿಂದ ಮಾಡಬೇಕಾ, ಇಲ್ಲಾ ಶಾಲೆಯಿಂದ ನಿರ್ವಹಿಸಬೇಕಾ ಅನ್ನುವ ಕುರಿತು ತಿಳಿಸಿಲ್ಲ. ದಿನಕ್ಕೊಂದು ಆದೇಶವನ್ನು ಜಾರಿ ಮಾಡುವ ಮೂಲಕ ಶಿಕ್ಷಕ ಸಮುದಾಯವನ್ನೇ ಗೊಂದಲಕ್ಕೆ ಸಿಲುಕಿಸಲಾಗುತ್ತಿದೆ. ವಿದ್ಯಾಗಮ ಯೋಜನೆ ಆರಂಭದ ಹಿನ್ನೆಲೆಯಲ್ಲಿ ಕೊರೊನಾ ಡ್ಯೂಟಿಗೆ ಶಿಕ್ಷಕರನ್ನು ನಿಯೋಜನೆ ಮಾಡುವಂತಿಲ್ಲ ಎಂಬ ಶಿಕ್ಷಣ ಸಚಿವರ ಆದೇಶಕ್ಕೆ ಸರಕಾರವೇ ಕಿಂಚಿತ್ತೂ ಬೆಲೆಯನ್ನೂ ನೀಡುತ್ತಿಲ್ಲ. ಸುಮ್ಮನೆ ಶಿಕ್ಷಕರು, ವಿದ್ಯಾರ್ಥಿಗಳ ಜೊತೆಗೆ ಚೆಲ್ಲಾಟವಾಡುವುದನ್ನು ಬಿಟ್ಟು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಕೊರೊನಾ ಮುಕ್ತವಾಗಿ ಶಿಕ್ಷಣ ನೀಡುವ ಕಡೆಗೆ ಯೋಚಿಸುವುದು ಒಳಿತು.