ಕಲ್ಬುರ್ಗಿ: (Temporary selection list of teachers) ಕಲ್ಯಾಣ ಕರ್ನಾಟಕದ ಹೊರಗಿನ ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಅಭ್ಯರ್ಥಿಗಳು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರತಿ ಬಾರಿ ಪಟ್ಟಿ ಬಿಡುಗಡೆಯಾದಾಗ ಒಂದಲ್ಲೊಂದು ಸಮಸ್ಯೆಯಾಗಿ ವಿವಾದ ಸೃಷ್ಟಿಯಾಗುತ್ತಿದ್ದು, ಫೆ. 27 ರಂದು ಬಿಡುಗಡೆಯಾದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅನ್ಯಾಯ ಆಗಿದೆ ಎಂದು ಅರ್ಜಿ ಸಲ್ಲಿಸಿದ ಹೊರ ಜಿಲ್ಲೆಗಳ ಅಭ್ಯರ್ಥಿಗಳು ಇದೀಗ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಕಲ್ಯಾಣ ಕರ್ನಾಟಕದ ಶಿಕ್ಷಕರ ಹುದ್ದೆಗಳಲ್ಲಿ ಶೇ. 80 ರಷ್ಟು ಹುದ್ದೆಗಳು ಸ್ಥಳೀಯರಿಗೆ ಹಾಗೂ ಶೇ. 20 ರಷ್ಟು ಹುದ್ದೆಗಳು ಹೊರಗಿನವರಿಗೆ ಎಂದು ಅವಕಾಶ ಕಲ್ಪಿಸಿ 2022 ಮಾರ್ಚ್ 21 ರಂದು ಸರಕಾರ ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ ಇದೀಗ ಅದೇ ಶೇ. 20 ರಷ್ಟು ಹುದ್ದೆಗಳಲ್ಲಿ ಅನ್ಯಾಯ ಆಗಿದೆ ಎಂಬ ಕೂಗು ಕೇಳಿ ಬರುತ್ತಿದೆ. ಕಲ್ಯಾಣ ಕರ್ನಾಟಕದ ಹೊರಗಿನ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದು, ಅನಂತರ ಪರೀಕ್ಷೆ ಬರೆದಿದ್ದು, 2022 ರ ನ. 18 ರಂದು ಬಿಡುಗಡೆಯಾದ ಮೊದಲ ತಾತ್ಕಾಲಿಕ ಪಟ್ಟಿಯಲ್ಲಿ ಅವರುಗಳ ಹೆಸರು ಬಂದಿತ್ತು. ಈ ಪಟ್ಟಿ ಬಿಡುಗಡೆಯಾದ ಬಳಿಕ ಕೆಲವು ವಿವಾಹಿತ ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಲಾಗಿತ್ತು.
ಇದಾದ ಬಳಿಕ ನ್ಯಾಯಾಲಯ ಮೊದಲು ಬಿಡುಗಡೆ ಮಾಡಿದ ಪಟ್ಟಿಯನ್ನು ತಡೆಹಿಡಿದು, ಮರುಪಟ್ಟಿ ಪ್ರಕಟಿಸುವಂತೆ ಸೂಚನೆ ನೀಡಿತ್ತು. ಸೂಚನೆಯಂತೆ ಫೆ. 27 ರಂದು ಶಿಕ್ಚಕರ ನೇಮಕಾತಿಯ ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಆದರೆ ಮೊದಲು ಪ್ರಕಟವಾಗಿದ್ದ ಪಟ್ಟಿಯಲ್ಲಿದ್ದ ಹೆಸರುಗಳು ಈ ಬಾರಿ ಇರಲಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಗಳು ಅಭ್ಯರ್ಥಿಗಳ ಬಳಿ ಇದ್ದಿರಲಿಲ್ಲ. ಇದಾದ ನಂತರ ರಾಜ್ಯ ಸರಕಾರ ಹೊಸ ಅಧಿಸೂಚನೆ ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಶೇ. 20 ರಷ್ಟು ಹುದ್ದೆಗಳಲ್ಲಿ ಮೊದಲಿಗೆ ಕಲ್ಯಾಣ ಕರ್ನಾಟಕದವರಿಗೆ ಆದ್ಯತೆ ನೀಡಬೇಕು ಎಂಬ ನಿಯಮವನ್ನು ಪಾಲನೆ ಮಾಡಲಾಗಿದ್ದು, ಇದರಿಂದಾಗಿ ಸುಮಾರು 171 ಅಭ್ಯರ್ಥಿಗಳ ಹೆಸರನ್ನು ಕೈಬಿಡಲಾಗಿದೆ.
ಇದೀಗ ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಕೈಬಿಡಲಾದ ಅಭ್ಯರ್ಥಿಗಳು ಹೈ ಕೋರ್ಟ್ ಮೊರೆ ಹೋಗಿದ್ದು, ವಿಚಾರಣೆಯನ್ನು ಮಾ.15 ಕ್ಕೆ ಮುಂದೂಡಲಾಗಿದೆ. ಮೊದಲು ಅರ್ಜಿ ಕರೆದಾಗ ಯಾವ ನಿಯಮಗಳು ಇರುತ್ತವೆಯೋ ಅದೇ ನಿಯಮಗಳ ಅನ್ವಯ ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂಬುದಾಗಿ ಅಭ್ಯರ್ಥಿಗಳು ವಾದಿಸುತ್ತಿದ್ದಾರೆ.
ಇದನ್ನೂ ಓದಿ : ಮಾರ್ಚ್ 9 ರಂದು ಕರ್ನಾಟಕ ಬಂದ್: ಹೋರಾಟ, ಮುಷ್ಕರ ಕ್ಕೆ ಕರೆಕೊಟ್ಟ ಡಿ.ಕೆ.ಶಿವಕುಮಾರ್
ಇದನ್ನೂ ಓದಿ : Modi’s arrival in Karnataka: ಮಾರ್ಚ್ 12 ರಂದು ಮತ್ತೆ ಧಾರವಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ
Temporary selection list of teachers: Injustice in the temporary selection list of teachers: Candidates who went to court