ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯನ್ನು ಅನುಷ್ಠಾನಗೊಳಿಸಲು ಆದೇಶ ಹೊರಡಿಸಿದೆ. ಆದರೆ ವಿದ್ಯಾಗಮ ಯೋಜನೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಶಿಕ್ಷಕರು ಆಗ್ರಹಿಸಿದ್ದಾರೆ.

ಈಗಾಗಲೇ ಶೈಕ್ಷಣಿಕ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಸಭೆಯನ್ನು ನಡೆಸಲಾಗಿದ್ದು, ಶಿಕ್ಷಕರು ಮನೆಯಿಂದಲೇ ವಿದ್ಯಾಗಮ ಯೋಜನೆಯನ್ನು ಕೈಗೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸಬೇಕು. ವಿದ್ಯಾರ್ಥಿಗಳನ್ನು ಸಾಮಾಜಿಕ ಜಾಲತಾಣ, ಮೊಬೈಲ್ ಕಲಿಕೆ, ಚಂದನ ಟಿವಿ ಹಾಗೂ ವಾಟ್ಸಾಪ್ ಗುಂಪುಗಳನ್ನು ಬಳಸಿಕೊಂಡು ಶಿಕ್ಷಕರು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶವನ್ನು ನೀಡಬೇಕು.

ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಹಳ್ಳಿಗಳಿಗೆ ಶಿಕ್ಷಕರು ತೆರಳಿ ಮಾರ್ಗದರ್ಶನ ಮಾಡುವ ಪರಿಸ್ಥಿತಿಯಲ್ಲಿಲ್ಲ. ವಿಶೇಷವಾಗಿ ಸಮುದಾಯದಲ್ಲಿ ಗುಡಿ, ಗುಂಡಾರಗಳಲ್ಲಿ ಪಾಠ ಮಾಡುವುದು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಶಾಲಾ ಮಕ್ಕಳ ಪಾಲಕರ ವಾಟ್ಸಾಪ್ ಗ್ರೂಪ್ ರಚನೆ ಮಾಡಿಸಿದ್ದು, ಅದರ ಮೂಲಕ ಕಲಿಕೆಯನ್ನು ಜಾರಿಗೊಳಿಸಲು ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇನ್ನು ಮಹಿಳಾ ಶಿಕ್ಷಕರಿಯರು ಸಮುದಾಯದ ಮಧ್ಯದಲ್ಲಿ ಹೋಗಿ ಪಾಠ ಮಾಡುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಮಾರ್ಗದರ್ಶಿ ಶಿಕ್ಷಕರು ಮನೆಯಿಂದಲೇ ಮಕ್ಕಳಿಗೆ ನಿರಂತರ ಕಲಿಕೆಗೆ ಮುನ್ನುಡಿ ಬರೆಯಲು ಸಜ್ಜಾಗಿದ್ದು, ಇದನ್ನು ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಆಗ್ರಹಿಸಿದ್ದು, ಈ ಕುರಿತು ರಾಜ್ಯ ಸಮಗ್ರ ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಸಂಘದ ಅಧ್ಯಕ್ಷ ವಿ.ಎಂ.ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಿ ಮುಂತಾದವರು ಉಪಸ್ಥಿತರಿದ್ದರು.