ಯಾದಗಿರಿ : ಹೇಳಿಕೊಳ್ಳುವುದಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆ. ಆದರೆ ಶಾಲೆಯೊಳಗೆ ಕಾಲಿಟ್ಟರೆ ಸಾಕು ಪ್ರಾಣಿಗಳು ಬದುಕೋದಕ್ಕೂ ಕಷ್ಟಕರವಾದ ಪರಿಸ್ಥಿತಿ. ವಿದ್ಯುತ್ ಸಂಪರ್ಕ, ಶೌಚಾಲಯ ವ್ಯವಸ್ಥೆಯಿಲ್ಲದೇ ವಿದ್ಯಾರ್ಥಿಗಳು ಕಂಗಾಲಾಗಿದ್ರು. ಸೋರುವ ಮೇಲ್ಚಾವಣೆಯಲ್ಲಿಯೇ ವಾಸಿಸುತ್ತಿದ್ದ ವಿದ್ಯಾರ್ಥಿಗಳ ಸಮಸ್ಯೆಗೆ ಇದೀಗ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಕಲ್ಗದ್ದೆ ಮುಕ್ತಿ ದೊರಕಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಮೋಟಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆ ಕಳೆದ ಕೆಲವು ವರ್ಷಗಳಿಂದಲೂ ಮೂಲ ಸೌಕರ್ಯಗಳೇ ಇಲ್ಲದೇ ತತ್ತರಿಸಿ ಹೋಗಿತ್ತು. ಶಾಲೆಯ ಒಳಹೊಕ್ಕರೆ ಸಾಕು ಅಲ್ಲಿ ಯಾವುದೇ ಮೂಲ ಸೌಕರ್ಯಗಳೂ ಇರಲಿಲ್ಲ. ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ವಿದ್ಯಾರ್ಥಿಗಳು ಕತ್ತಲೆಯಲ್ಲಿಯೇ ಕಾಲ ಕಳೆಯುತ್ತಿದ್ದರು. ಶೌಚಾಲಯ ಸಂಪೂರ್ಣವಾಗಿ ದುಸ್ಥಿತಿಗೆ ತಲುಪಿದ್ದು ವಿದ್ಯಾರ್ಥಿಗಳು ಬಯಲು ಶೌಚವನ್ನೇ ನೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲಾ ಶಾಲೆಯ ಮೇಲ್ಚಾವಣೆ ಸಂಪೂರ್ಣವಾಗಿ ಹಾಳಾಗಿದ್ದು, ಮಳೆಗಾಲದಲ್ಲಿ ಸೋರುತ್ತಿದೆ.

ಮೋಟನಹಳ್ಳಿ ಶಾಲೆಗೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಕಲ್ಗದ್ದೆ ಅವರು ಇತ್ತೀಚೆಗೆ ಶಾಲೆಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ವೇಳೆಯಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ ಅವರ ಗಮನಕ್ಕೆ ತಂದಿದ್ದಾರೆ.

ಕೂಡಲೇ ಜಯಪ್ರಕಾಶ್ ಹೆಗ್ಡೆ ಅವರು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ರಶ್ಮಿ ಮಹೇಶ್ ಅವರಿಗೆ ಶಾಲೆಯಲ್ಲಿನ ಸಮಸ್ಯೆಯನ್ನು ಪರಿಹರಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಅಲ್ಲದೇ ಹಿಂದುಳಿದ ವರ್ಗಗಳ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಶೀಘ್ರದಲ್ಲಿಯೇ ಶಾಲೆಯನ್ನು ದುರಸ್ಥಿ ಪಡಿಸುವಂತೆ ಆದೇಶಿಸಿದ್ದರು. ಇದೀಗ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಸುಮಾರು 240 ವಿದ್ಯಾರ್ಥಿಗಳನ್ನು ಇದೀಗ ತಾತ್ಕಾಲಿಕವಾಗಿ ಸಮೀಪದ ಬಂದಳ್ಳಿಯಲ್ಲಿರುವ ಏಕಲವ್ಯ ಶಾಲೆಗೆ ಶಿಫ್ಟ್ ಮಾಡಲಾಗಿದೆ.

ಮೋಟನಹಳ್ಳಿ ಶಾಲೆಯನ್ನು ಸಂಪೂರ್ಣವಾಗಿ ದುರಸ್ಥಿ ಕಾರ್ಯವನ್ನು ನಡೆಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ. ಒಟ್ಟಿನಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರ ಕಾರ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿದ್ಯಾರ್ಥಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ಯಾದಗಿರಿ ಜಿಲ್ಲೆಯ ಕರುನಾಡ ಸೇನೆಯ ಜಿಲ್ಲಾ ಸಂಚಾಲಕರಾದ ಕಾಶಿನಾಥ್ ಕಣಿಕಲ್ ಅಭಿನಂದನೆ ಸಲ್ಲಿಸಿದ್ದಾರೆ.