ತಂದೆ-ಮಗಳ ಭಾವನಾತ್ಮಕ ಕಥೆಯ ‘ಪ್ಯಾರ್’ ಸಿನಿಮಾ ಟೀಸರ್ ಬಿಡುಗಡೆ: ವಿಶೇಷ ಪಾತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್

ತಂದೆ-ಮಗಳ ಸುಂದರ ಬಾಂಧವ್ಯವನ್ನು ತೆರೆದಿಡಲು ‘ಪ್ಯಾರ್’ ಸಿನಿಮಾ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಸುದ್ದಿಗೋಷೋಧಿ ನಡೆಸಿ, ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡಲಾಗಿದೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
PyarMovie
PyarMovie

ಸ್ಯಾಂಡಲ್‌ವುಡ್‌ನಲ್ಲಿ ಪ್ರೀತಿ-ಪ್ರೇಮದ ಕಥೆಯ ಜತೆಗೆ ತಂದೆ-ಮಗಳ ಸುಂದರ ಬಾಂಧವ್ಯವನ್ನು ತೆರೆದಿಡಲು ‘ಪ್ಯಾರ್’ ಸಿನಿಮಾ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಸುದ್ದಿಗೋಷೋಧಿ ನಡೆಸಿ, ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡಲಾಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್ ಅವರು ಅತ್ಯಂತ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾದ ಮತ್ತೊಂದು ವಿಶೇಷತೆಯಾಗಿದೆ.

ಎಸ್.ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್.ಎಸ್. ನಾಗಶ್ರೀ ಅವರು ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಎಸ್. ಸುಪ್ರೀತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಪ್ರೀತಿಯ ಜೊತೆಗೆ ತಂದೆ-ಮಗಳ ನಡುವಿನ ಭಾವನಾತ್ಮಕ ಸಂಬಂಧವೇ ಈ ಚಿತ್ರದ ಹೂರಣ. ತಂದೆಗೋಸ್ಕರ ಮಗಳು ಯಾವ ಮಟ್ಟಕ್ಕೆ ನಿಲ್ಲುತ್ತಾಳೆ, ಪ್ರಾಣವನ್ನೇ ಮುಡಿಪಾಗಿಡಲು ಹೇಗೆ ಸಿದ್ಧಳಾಗುತ್ತಾಳೆ ಎನ್ನುವುದೇ ಈ ಸಿನಿಮಾದ ರೋಚಕ ಕಥಾನಕ ಎಂದು ನಿರ್ದೇಶಕ ಸುಪ್ರೀತ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ಮಾಪಕಿ ನಾಗಶ್ರೀ ಮಾತನಾಡಿ, ‘ಪ್ಯಾರ್’ ಎಂಬ ಶೀರ್ಷಿಕೆ ರವಿಚಂದ್ರನ್ ಅವರಿಗೆ ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಎಂದಿದ್ದಾರೆ.

ಈ ಸಿನಿಮಾದಿಂದ ಈಗಾಗಲೇ ಬಿಡುಗಡೆಯಾಗಿರುವ ‘ಒಂದೇ ಮಾತಲಿ ಹೇಳೋದಾದರೆ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೀಕ್ಷಣೆ ಪಡೆದು ಹಿಟ್ ಆಗಿದೆ. ವಿಶೇಷವೆಂದರೆ, ತುಂಬಾ ದಿನಗಳ ಬಳಿಕ ದಿಗ್ಗಜ ಗಾಯಕರುಗಳಾದ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಅವರು ಈ ಚಿತ್ರಕ್ಕಾಗಿ ಜತೆಯಾಗಿ ಹಾಡಿದ್ದಾರೆ. ಇವರೊಂದಿಗೆ ಕುನಾಲ್ ಗಾಂಜಾವಾಲ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಪಲಕ್ ಮುಚ್ಚಲ್ ಕೂಡ ಧ್ವನಿಯಾಗಿದ್ದಾರೆ. ಪಳನಿ ಡಿ. ಸೇನಾಪತಿ ಸಂಗೀತ ಹಾಗೂ ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣ ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ.

ಕಾಶ್ಮೀರ, ರಾಜಸ್ಥಾನ, ಅಂಡಮಾನ್, ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರಿನಂತಹ ಸುಂದರ ತಾಣಗಳಲ್ಲಿ ಈ ಚಿತ್ರದ ಶೂಟಿಂಗ್ ನಡೆಸಲಾಗಿದೆ. ‘ಮನದ ಕಡಲು’ ಖ್ಯಾತಿಯ ನಟಿ ರಾಶಿಕಾ ಶೆಟ್ಟಿ ಹಾಗೂ ನಾಯಕ ರಿಶ್ವಿನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇಡೀ ತಂಡದ 4 ವರ್ಷಗಳ ಶ್ರಮ ಈ ಸಿನಿಮಾದಲ್ಲಿದೆ ಎಂದು ನಾಯಕ ನಟ ರಿಶ್ವಿನ್ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಭರ್ಜರಿ ಸಿದ್ಧತೆ ನಡೆಸಿದೆ.

Topics

ಸಂಬಂಧಿತ ಸುದ್ದಿಗಳು