ನವದೆಹಲಿ : ಅಫ್ಗಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಕೈವಶವಾಗಿರುವ ಹಿನ್ನೆಲೆಯಲ್ಲಿ ಸ್ವತಃ ಅಫ್ಘನ್ ಪ್ರಜೆಗಳು ಕೂಡ ದೇಶ ಬಿಟ್ಟು ತೆರಳುತ್ತಿದ್ದಾರೆ. ಅಫ್ಗಾನಿಸ್ತಾನದ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಸ್ಥಳಾಂತರ ಮಾಡಲು ಕೂಡ ಭಾರತ ಸರ್ಕಾರ ನಿರ್ಧಾರ ಮಾಡಿದೆ. ಅಧಿಕಾರಿಗಳು, ಸಿಬ್ಬಂದಿ ಸ್ಥಳಾಂತರಕ್ಕೆ ಭಾರತ ಸರ್ಕಾರ ತೀರ್ಮಾನ ಕೈಗೊಂಡಿದೆ.

ಅಫ್ಗಾನಿಸ್ತಾನದ ಕಾಬೂಲ್‌ನಿಂದ ಭಾರತಕ್ಕೆ ಆಗಮಿಸಿರುವ ವಿಮಾನ ಸಂಪೂರ್ಣ ಭರ್ತಿಯಾಗಿ ಬಂದಿರುವ ಮಾಹಿತಿ ಲಭ್ಯವಾಗಿದೆ. ರಾತ್ರಿ 8 ಗಂಟೆಗೆ ಏರ್ ಇಂಡಿಯಾ ವಿಮಾನ ದೆಹಲಿ ತಲುಪಲಿದೆ ಎಂದು ಹೇಳಲಾಗಿತ್ತು. ಇದೀಗ, 129 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಸ್ವದೇಶಕ್ಕೆ ಬಂದಿಳಿದಿದೆ.

ಈಗ ಅಫ್ಘನ್ ರಾಜಧಾನಿ ಕಾಬೂಲ್ನ್ನು ತಾಲಿಬಾನ್ ಸಂಘಟನೆಯ ತೆಕ್ಕೆಯಲ್ಲಿ ಇರುವುದರಿಂದ ಅಫ್ಘನ್ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಹಾಗೂ ಉಪಾಧ್ಯಕ್ಷ ಅಮರುಲ್ಲಾ ಸಾಹೇಬ್ ಅಧಿಕಾರ ಹಸ್ತಾಂತರಿಸಿ ರಾಜಧಾನಿ ಕಾಬೂಲ್ ತೊರೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಧಿಕಾರ ಹಸ್ತಾಂತರಿಸಿ ಅಫ್ಘನ್ ತೊರೆದಿರುವ ಅಶ್ರಫ್ ಘನಿ, ತಜಿಕಿಸ್ತಾನ್‌ಕ್ಕೆ ತೆರಳಿರುವ ಬಗ್ಗೆ ಕೂಡ ಮಾಹಿತಿ ಲಭ್ಯವಾಗಿದೆ.

ಅಷ್ಟೇ ಅಲ್ಲದೆ, ಕಾಬೂಲ್ನಲ್ಲಿದ್ದ ರಾಯಭಾರ ಕಚೇರಿಯನ್ನು ಜರ್ಮನಿ ಮುಚ್ಚಿದೆ. ಅಫ್ಘನ್‌ನಿಂದ ವಾಪಸಾಗಲು ಜರ್ಮನಿ ತನ್ನ ನಿವಾಸಿಗಳಿಗೆ ಸೂಚನೆ ನೀಡಿದೆ. ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳು ಸ್ಥಳಾಂತರ ಆಗಿದ್ದಾರೆ. ಅಧಿಕಾರಿಗಳು, ಎಲ್ಲಾ ಸಿಬ್ಬಂದಿಗಳನ್ನು ವಿಮಾನಗಳ ಮೂಲಕ ಅಮೆರಿಕ ಸೇನೆ ಸ್ಥಳಾಂತರಿಸಿದೆ.
ಇದನ್ನೂ ಓದಿ : ತಾಲಿಬಾನ್ ಅಟ್ಟಹಾಸಕ್ಕೆ ಶರಣಾಗತಿಯಾದ ಅಪ್ಘಾನಿಸ್ತಾನ
ಇದನ್ನೂ ಓದಿ : ಅಫ್ಘಾನಿಸ್ತಾನದ ಮೂರು ನಗರಗಳನ್ನು ವಶಕ್ಕೆ ಪಡೆದ ತಾಲಿಬಾನ್