ತಿರುವನಂತಪುರ : ಕೋಯಿಕ್ಕೋಡಿನ ಕರಿಪ್ಪುರ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, 110ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ವಿಮಾನ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ.

ದುಬೈನಿಂದ ಕೇರಳದ ಕರಿಪ್ಪುರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ನಿನ್ನೆ ಸಂಜೆ 7.30ರ ಸುಮಾರಿಗೆ ದುರಂತಕ್ಕೆ ಈಡಾಗಿತ್ತು. ಘಟನೆಯಲ್ಲಿ ಇದೀಗ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯನ್ನು ಕಂಡಿದೆ. ದುರಂತದಲ್ಲಿ ಗಾಯಗೊಂಡಿರುವರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರಂತ ಸ್ಥಳದಲ್ಲಿ 17 ಮಂದಿ ಸಾವನ್ನಪ್ಪಿದರೆ ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಕೋಯಿಕ್ಕೋಡ್ ಆಸ್ಪತ್ರೆ ಹಾಗೂ ಮಲಪ್ಪುರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಓರ್ವ ಗರ್ಭಿಣಿ, ನಾಲ್ವರು ಮಕ್ಕಳು ಹಾಗೂ 15 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.

ವಿಮಾನ ದುರಂತದ ಬೆನ್ನಲ್ಲೇ ವಿಮಾನದ ಬ್ಲ್ಯಾಕ್ಬಾಕ್ಸ್ ಹಾಗೂ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ಕೂಡ ಪತ್ತೆಯಾಗಿದೆ. ಇನ್ನು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಸಂಗ್ರಹಕ್ಕೆ ಪ್ರಯತ್ನಿಸಲಾಗುತ್ತಿದೆ. ಆದರೆ ವಿಮಾನದ ಫ್ಲೋರ್ಬೋರ್ಡ್ ತುಂಡಾಗಿರುವ ಹಿನ್ನೆಲೆಯಲ್ಲಿ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಸಂಗ್ರಹ ಕಷ್ಟವಾಗಲಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ತಿಳಿಸಿದೆ.

ದುರಂತಕ್ಕೆ ಸಂಬಂಧಿಸಿದಂತೆ ಈಗಾಗಳೇ ಪರಿಹಾರ ಕ್ರಮಗಳನ್ನು ಸಮಾರೋಪಾದಿಯಲ್ಲಿ ನಡೆಸಲಾಗುತ್ತಿದೆ. ಪ್ಲೈಟ್ ರಾಡಾರ್ 24ರ ಪ್ರಕಾರ ಫೈಲೆಟ್ ಎರಡು ಬಾರಿ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಯತ್ನಿಸಿರುವುದು ತಿಳಿದುಬಂದಿದೆ.

ಮೇಲ್ನೋಟಕ್ಕೆ ಹವಾಮಾನ ವೈಫರುತ್ಯದಿಂದಲೇ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ದುರಂತದ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ತನಿಖೆಯನ್ನು ನಡೆಸುತ್ತಿದೆ.