ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ. ಇದೀಗ ಕೊರೊನಾ ಹುಟ್ಟಿಗೆ ಕಾರಣವಾಗಿದ್ದ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ. ಮಾರಕ ವೈರಸ್ ಸೊಳ್ಳೆಯಿಂದ ಹರಡುತ್ತಿದ್ದು, ಈಗಾಗಲೇ 60 ಮಂದಿಗೆ ಸೋಂಕು ತಗುಲಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ.

ಕೆಂಪು ರಾಷ್ಟ್ರ ಚೀನಾದಲ್ಲಿ ದಿನಕ್ಕೊಂದು ವೈರಸ್ ಹುಟ್ಟಿಕೊಳ್ಳುತ್ತಿದೆ. ವುಹಾನ್ ನಲ್ಲಿ ಹುಟ್ಟಿದ್ದ ಕೊರೊನಾ ಅನ್ನೋ ವೈರಸ್ ಸೋಂಕು ಇಂದು ವಿಶ್ವದಾದ್ಯಂತ ಕೋಟ್ಯಾಂತರ ಜನರನ್ನು ಬಲಿ ಪಡೆದಿದೆ. ಇದುವರೆಗೂ ಸೋಂಕಿಗೆ ಔಷಧ ಪತ್ತೆಯಾಗಿಲ್ಲ. ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಿಗೆ ಕೊರೊನಾ ಹೆಮ್ಮಾರಿಯ ಹೊಡೆತಕ್ಕೆ ಸಿಲುಕಿ ಒದ್ದಾಡುತ್ತಿವೆ. ಈ ನಡುವಲ್ಲೇ ಅದೇ ಚೀನಾದಲ್ಲಿ ಮತ್ತೊಂದು ವೈರಸ್ ಹುಟ್ಟಿಕೊಂಡಿರುವುದು ಆತಂಕವನ್ನು ಮೂಡಿಸಿದೆ.

ಚೀನಾ ಸರಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಈ ಕುರಿತು ವರದಿಯೊಂದನ್ನು ಪ್ರಕಟಿಸಿದೆ. ಸೊಳ್ಳೆಯಿಂದ ಹರಡುವ ವೈರಸ್ ಗೆ ಎಸ್ಎಫ್ ಟಿಎಸ್ ಎಂದು ಗುರುತಿಸಲಾಗಿದೆ. ಚೀನಾದಲ್ಲಿ 2011ರಲ್ಲಿಯೇ ಈ ವೈರಸ್ ಪತ್ತೆಯಾಗಿತ್ತು. ಅಲ್ಲದೇ ವೈರಸ್ ನ ಫ್ಯಾಥೋಜೀನ್ ಅನ್ನು ಸಂಗ್ರಹಿಸಿ ಇಡಲಾಗಿತ್ತು.

ಇದೀಗ ಕೀಟದ ಮೂಲಕ ವೈರಸ್ ಮಾನವನ ದೇಹ ಸೇರಿದೆ ಎನ್ನಲಾಗುತ್ತಿದ್ದು, ಸೊಳ್ಳೆಯ ಮೂಲಕ ಜನರಿಗೆ ಹರಡುತ್ತಿದೆ ಎಂದು ಚೀನಾದ ವೈದ್ಯ ಶೆಂಗ್ ಜೀಪಂಗ್ ತಿಳಿಸಿದ್ದಾರೆ.

ಕೇವಲ ಸೊಳ್ಳೆ ಮಾತ್ರವಲ್ಲ ಕೀಟಗಳ ಕಡಿತದಿಂದಲೂ ವೈರಸ್ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿದೆ. ಕೊರೊನಾ ಸೋಂಕು ಮನುಷ್ಯನಿಂದ ಮನುಷ್ಯರಿಗೆ ಹರಡುವ ವೈರಸ್ ಆಗಿದ್ರೆ, ಇದೀಗ ಎಸ್ಎಫ್ ಟಿಎಸ್ ಸೊಳ್ಳೆಯಿಂದ ಹರಡುತ್ತಿರುವುದು ಆತಂಕವನ್ನು ತಂದೊಡ್ಡಿದೆ.

ಚೀನಾದಲ್ಲಿ ಆರಂಭಿಕ ಹಂತದಲ್ಲಿ 60 ಮಂದಿ ಸೋಂಕಿಗೆ ತುತ್ತಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಜನರು ಯಾವುದಕ್ಕೂ ಎಚ್ಚರಿಕೆಯಿಂದ ಇರಬೇಕು. ಒಂದೊಮ್ಮೆ ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ.