ಬೀಜಿಂಗ್ : ವಿಶ್ವದಾದ್ಯಂತ ಕೊರೋನಾ ಮೂರನೆ ಅಲೆಯ ಪ್ರಭಾವ ತಗ್ಗುತ್ತಿದ್ದು ಜನಜೀವನ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳುತ್ತಿರುವ ಹೊತ್ತಿನಲ್ಲೇ ಮತ್ತೊಮ್ಮೆ ಚೀನಾದಲ್ಲಿ (China) ಕೊರೋನಾ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದ್ದು, ಹಲವೆಡೆ ಲಾಕ್ ಡೌನ್ ( Lockdown) ಜಾರಿಯಾಗಿದೆ. ಇದರ ಬೆನ್ನಲ್ಲೇ ಸೋಮವಾರ ಒಂದೇ ದಿನ ಚೀನಾದಲ್ಲಿ 5280 ಹೊಸ ಪ್ರಕರಣ ದಾಖಲಾಗಿದ್ದು, ಚೀನಾ ಆತಂಕದ ಸ್ಥಿತಿಯಲ್ಲಿದೆ.

ಚೀನಾದಾದ್ಯಂತ (China)ಕೊರೋನಾ ಜೊತೆಗೆ ಒಮೈಕ್ರಾನ್ ಹರಡುವಿಕೆಯು ಹೆಚ್ಚಾಗಿದ್ದು ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 3 ಸಾವಿರ ಅಧಿಕ ಜನರಲ್ಲಿ ಓಮೈಕ್ರಾನ್ ಕಾಣಿಸಿಕೊಂಡಿದ್ದು, ಎರಡು ವರ್ಷದಲ್ಲಿಯೇ ಇದು ಅತಿ ಹೆಚ್ಚು ಕೇಸ್ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಚೀನಾದಾದ್ಯಂತ ಮುಂಜಾಗ್ರತಾ ಕ್ರಮವಾಗಿ ಒಂದೊಂದೆ ಸ್ಥಳವನ್ನು ಲಾಕ್ ಡೌನ್ ಮಾಡಲಾಗುತ್ತಿದ್ದು, ಸುಮಾರು 24 ಮಿಲಿಯನ್ ಜನರು ಇರುವ ಜಿಲಿನ್ ಪ್ರಾಂತ್ಯವನ್ನು ಸೋಮವಾರ ಸೀಲ್ಡೌನ್ ಮಾಡಲಾಗಿದೆ. 2019ರಲ್ಲಿ ಮೊಟ್ಟಮೊದಲು ಕೊರೊನಾ ವೈರಸ್ ಕಾಣಿಸಿಕೊಂಡಾಗ 2020ರಲ್ಲಿ ಹುಬೈ ಮತ್ತು ವುಹಾನ್ಗಳನ್ನು ಲಾಕ್ಡೌನ್ ಮಾಡಲಾಗಿತ್ತು. ಅದಾದ ಮೇಲೆ ಕ್ರಮೇಣ ಚೀನಾದಲ್ಲಿ ಕೊರೊನಾ ಕೇಸ್ಗಳಲ್ಲಿ ಇಳಿಕೆಯಾಗುತ್ತ ಬಂದಿತ್ತು. ಆದರೆ ಈಗ ಮತ್ತೆ ವೈರಾಣು ಹರಡುವಿಕೆ ಹೆಚ್ಚಾಗಿದೆ.

ಮೊದಲು ಚೀನಾದ ದಕ್ಷಿಣ ನಗರವಾದ ಶೆನ್ಝೆನ್ನ್ನು ಲಾಕ್ಡೌನ್ (Lockdown) ಮಾಡಲಾಗಿದ್ದು, ಈ ನಗರ ಚೀನಾದ ತಂತ್ರಜ್ಞಾನ ಮತ್ತು ವ್ಯಾಪಾರ ಕೇಂದ್ರವಾಗಿದ್ದು, ಸುಮಾರು 17.5 ಮಿಲಿಯನ್ ಜನರಿದ್ದಾರೆ. ಚೀನಾ ಪರಿಸ್ಥಿತಿ ನಿಯಂತ್ರಣಕ್ಕೆ ಸದ್ಯ ಒಂದು ವಾರದ ಲಾಕ್ಡೌನ್ ಹೇರಿದೆ. ಇದಾದ ಬಳಿಕ ಕೊರೊನಾ ಕೇಸ್ಗಳ ಸಂಖ್ಯೆ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಥಳೀಯ ಆಡಳಿತ ತಿಳಿಸಿದೆ. ಪೂರ್ವದಲ್ಲಿರುವ ಶಾಂಘೈ ಸಿಟಿಯಿಂದ ದಕ್ಷಿಣದಲ್ಲಿರುವ ಶೆನ್ಝೆನ್ವರೆಗೆ, ಬೀಜಿಂಗ್ನ ಹಲವು ನಗರಗಳು ಸೇರಿ ಅನೇಕ ಕಡೆ ಕೊರೊನಾ ಉತ್ತುಂಗಕ್ಕೇರುತ್ತಿದೆ. ಇನ್ನು ಚೀನಾ ಸರ್ಕಾರ, ಸ್ಥಳೀಯ ಅಧಿಕಾರಿಗಳು ಹಲವು ಕ್ರಮಗಳ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗುತ್ತಿದ್ದಾರೆ.

ಕಟ್ಟುನಿಟ್ಟಿನ ಲಾಕ್ ಡೌನ್ ಹೇರಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೇ ಸಾಮೂಹಿಕ ತಪಾಸಣೆ, ಲಾಕ್ಡೌನ್ಗಳು, ಪ್ರಯಾಣ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಇನ್ನು ಜಿಲಿಯನ್ ರಷ್ಯಾ ಮತ್ತು ಉತ್ತರ ಕೊರಿಯಾ ಗಡಿ ಭಾಗವಾಗಿದ್ದು, ಇಲ್ಲಿನ ಜನರಿಗೆ ತುಸು ಜಾಸ್ತಿ ಎನ್ನಿಸುವಷ್ಟೇ ನಿರ್ಬಂಧ ವಿಧಿಸಲಾಗಿದೆ. ಮನೆ ಬಿಟ್ಟು ಎಲ್ಲಿಗೂ ಹೋಗದಂತೆ ಸೂಚನೆ ನೀಡಲಾಗಿದೆ. ಚೀನಾದಲ್ಲಿ ಮತ್ತೆ ಜಾರಿಯಾಗಿರೋ ಲಾಕ್ ಡೌನ್ ವಿಶ್ವದ ಇತರ ರಾಷ್ಟ್ರಗಳನ್ನು ನಡುಗಿಸಿದ್ದು ಮತ್ತೆ ವಿಶ್ವದ ಮೇಲೆ ಕೊರೋನಾ ಕರಿಛಾಯೆ ಆವರಿಸಲಾರಂಭಿಸಿದೆ.
ಇದನ್ನೂ ಓದಿ : ಚೀನಾಕ್ಕೆ ಕೊರೊನಾ ಶಾಕ್ : ಮನೆಯಿಂದ ಹೊರಬಂದ್ರೆ ಕ್ರಿಮಿನಲ್ ಕೇಸ್
ಇದನ್ನೂ ಓದಿ : ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!
( China New Record Corona case in a single day, blockade of millions)