ದುಬೈ : ದುಬೈನ ಜೆಬೆಲ್ ಆಲಿ ಬಂದರಿನಲ್ಲಿ ಭಾರೀ ಸ್ಪೋಟ ಸಂಭವಿಸಿದೆ. ಕಂಟೇನರ್ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಎಮಿರೇಟ್ಸ್ ಮಾಧ್ಯಮ ಕಚೇರಿ ತಿಳಿಸಿದೆ.

ಜೆಬೆಲ್ ಅಲಿ ಬಂದರಿನಲ್ಲಿ ಹಡಗಿನಲ್ಲಿದ್ದ ಕಂಟೇನರ್ ಒಳಗೆ ಸ್ಫೋಟದಿಂದ ಉಂಟಾದ ಬೆಂಕಿಯನ್ನು ಸದ್ಯಕ್ಕೆ ನಿಯಂತ್ರಣಕ್ಕೆ ತರಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕೆಲವು ಗಂಟೆಗಳ ಕಾಲ ಕಾರ್ಯಾಚರಣೆಯನ್ನು ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಹಡಗಿನಲ್ಲಿದ್ದ ಕಂಟೈನರ್ ಗಳನ್ನು ತೆರವು ಮಾಡಲಾಗಿದೆ. ಹಡಗಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಲೇ ತೀವ್ರವಾಗಿ ಹರಡಿದ್ದರಿಂದಾಗಿ ಸ್ಥಳದಲ್ಲಿ ಆತಂಕ ಉಂಟಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಫ್ಟರ್ ಕಾರ್ಯಾಚರಣೆಯನ್ನು ನಡೆಸಿ ಬೆಂಕಿ ನಂದಿಸಿದ್ದಾರೆ.

ಭಾರೀ ಸ್ಪೋಟದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಮನೆಗಳಲ್ಲಿನ ಕಿಟಕಿ, ಬಾಗಿಲುಗಳು ಅಲುಗಾಡಿವೆ. ಇದರಿಂದಾಗಿ ಜನರು ಸಾಕಷ್ಟು ಭಯಗೊಂಡಿದ್ದರು. ಬೆಂಕಿ ಸಂಪೂರ್ಣವಾಗಿ ತಹಬದಿಗೆ ಬಂದ ಬೆನ್ನಲ್ಲೇ ಬಂದರಿನಲ್ಲಿ ಹಡಗುಗಳ ಸಂಚಾರ ಸಾಮಾನ್ಯವಾಗಿಯೇ ಮುಂದುವರಿದಿದೆ ಎಂದು ಬಂದರು ಪ್ರಾಧಿಕಾರ ತಿಳಿಸಿದೆ.