ಬೆಂಗಳೂರು: ರೈಲ್ವೇ ಇಲಾಖೆ ಯಲ್ಲಿ ಮುಂಬಡ್ತಿಗೆ ಸಂಬಂಧಿಸಿದಂತೆ ಪರೀಕ್ಷೆಗಳು ಕನ್ನಡದಲ್ಲಿಯೂ ನಡೆಯಲಿವೆ.
ನೈಋತ್ಯ ರೈಲ್ವೇ ಇಲಾಖೆಯು ಮುಂಬಡ್ತಿಗೆ ಸಂಬಂಧಿಸಿದ ಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲಿ ಕೂಡಾ ನಡೆಸಲು ಅಧಿಸೂಚನೆ ಹೊರಡಿಸಿದೆ.
ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ( V Somanna) ಅವರ ಸೂಚನೆಯ ಮೇರೆಗೆ ನೈಋತ್ಯ ರೈಲ್ವೆ ಇಲಾಖೆಯು LDCE ಹಾಗೂ GDCE (Limited Departmental Competitive Exam & General Departmental Competitive Exam) ಮುಂಬಡ್ತಿಗೆ ಸಂಬಂಧಿಸಿದ ಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲಿ ಸಹ ನಡೆಸಲು ಅಧಿಸೂಚನೆ ಹೊರಡಿಸಿದೆ.

Image Credit to Original Source
ಈ ಮೊದಲು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮುಂಬಡ್ತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಬರೆಯಲು ಅವಕಾಶ ಇತ್ತು. ಇದೀಗ ಇವುಗಳ ಜೊತೆಗೆ, ಕನ್ನಡದಲ್ಲಿ ಸಹ ಪರೀಕ್ಷೆ ನಡೆಸಲಾಗುತ್ತದೆ.ಇದರಿಂದ ಕನ್ನಡಿಗ ಸಿಬ್ಬಂದಿಗಳಿಗೆ ಮಾತೃಭಾಷೆಯಲ್ಲಿ ಪರೀಕ್ಷೆಯನ್ನು ಎದುರಿಸಲು ಅನುಕೂಲವಾಗಲಿದೆ.
ಈಗಾಗಲೇ ರೈಲ್ವೇ ಇಲಾಖೆಗೆ ನೇಮಕಾತಿಗೆ ನಡೆಸುವ ಪರೀಕ್ಷೆ ಕನ್ನಡದಲ್ಲಿ ಸಹ ಬರೆಯಲು ಅವಕಾಶವಿದೆ.ಸಚಿವರ ಈ ಆದೇಶದಿಂದ ಇಲಾಖೆಗೆ ಸೇರಿದ ನಂತರ ಸಹ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ದೊರೆತಂತಾಗಿದ್ದು, ಅನೇಕ ಕನ್ನಡಿಗ ಸಿಬ್ಬಂದಿಗೆ ಸಹಾಯವಾಗಲಿದೆ.
ಈ ಹಿಂದೆ ಆಗಸ್ಟ್ ತಿಂಗಳಿನಲ್ಲಿ ನೈಋತ್ಯ ರೈಲ್ವೇ ವತಿಯಿಂದ ನಡೆದಿದ್ದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಕೇಂದ್ರ ರೈಲ್ವೇ ಇಲಾಖೆ ಅವಕಾಶ ಮಾಡಿಕೊಟ್ಟಿತ್ತು.
ನೈಋತ್ಯ ರೈಲ್ವೇ ವಲಯದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ಎಲ್.ಎಸ್. ತೇಜಸ್ವಿ ಸೂರ್ಯ ಅಂದು ಅಭ್ಯರ್ಥಿಗಳು ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿದ್ದರು. ಆ ಸಂಧರ್ಭದಲ್ಲಿ ತಕ್ಷಣ ಸ್ಪಂದಿಸಿದ್ದ ಸಚಿವರು ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

Image Credit to Original Source
ರೈಲ್ವೇ ಇಲಾಖೆಯಲ್ಲಿ ಒಟ್ಟು ಹನ್ನೆರಡು ಲಕ್ಷ ಹುದ್ದೆಗಳಿದ್ದು ಹದಿನೈದು ಲಕ್ಷ ಜನರು ಪಿಂಚಣಿ ಪಡೆಯುತ್ತಿದ್ದಾರೆ. ಇಲಾಖೆಯಲ್ಲಿ ಖಾಲಿ ಇರುವ ಹದಿನಾರು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಪರೀಕ್ಷೆಯನ್ನು ಕೂಡಾ ಕನ್ನಡದಲ್ಲಿಯೇ ನಡೆಸಲು ಆದೇಶ ನೀಡಲಾಗಿದ್ದು ದಿನಗಳಲ್ಲಿ ಖಾಲಿ ಇರುವ 46 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದು ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.