ಕರ್ಜಿಕಾಯಿ ರೆಸಿಪಿ ಮನೆಯಲ್ಲೇ ಟ್ರೈಮಾಡಿದ್ದೀರಾ?

ತಮಿಳುನಾಡು ಮೂಲದ ಕರ್ಜಿಕಾಯಿ ತಿಂಡಿ ಕೃಷ್ಟಜನ್ಮಾಷ್ಟಮಿ ಹಾಗೂ ಗಣೇಶ ಹಬ್ಬಕ್ಕೆ ಪ್ರಧಾನವಾಗಿದೆ. ಕಾಯಿ, ಸಕ್ಕರೆ ಹಾಕಿ ತಯಾರಿಸುವ ಈ ಕರ್ಜಿಕಾಯಿಯನ್ನು ಸುಮಾರು ಒಂದು ವಾರ ಇಟ್ಟು ಸೇವಿಸಬಹುದು. ಮಕ್ಕಳು ಇಷ್ಟಪಟ್ಟು ತಿನ್ನುವ ಈ ಸಿಹಿತಿಂಡಿಯನ್ನು ಸರಳವಾಗಿ ಹೇಗೆ ಮಾಡುವುದು ನೋಡೋಣ ಬನ್ನಿ.

ಕರ್ಜಿಕಾಯಿ ಮಾಡಲು ಬೇಕಾಗುವ ಸಾಮಾಗ್ರಿಗಳು ¾ ಕಪ್ ಒಣ ತೆಂಗಿನಕಾಯಿ ½ ಕಪ್ ಪುಡಿ ಸಕ್ಕರೆ, 1 ಚಮಚ ಗಸಗಸೆ, 5 ಗೋಡಂಬಿ (ಕತ್ತರಿಸಿದ), 10 ಒಣದ್ರಾಕ್ಷಿ (ಕತ್ತರಿಸಿದ), 5 ಬಾದಾಮಿ (ಕತ್ತರಿಸಿದ), ¼ ಟೀಸ್ಪೂನ್ ಏಲಕ್ಕಿ ಪುಡಿ, 1 ಕಪ್ ಮೈದಾ, ರುಚಿಗೆ ಉಪ್ಪು, 2 ಚಮಚ ತುಪ್ಪ (ಬಿಸಿ), ½ ಕಪ್ ಬಿಸಿ ಹಾಲು ರೆಡಿಮಾಡಿ ಇಟ್ಟುಕೊಳ್ಳಬೇಕು.

ಮೊದಲನೆಯದಾಗಿ, ಒಂದು ದೊಡ್ಡ ಬಟ್ಟಲಿನಲ್ಲಿ ಒಣ ತೆಂಗಿನಕಾಯಿ ತೆಗೆದುಕೊಳ್ಳಿ, ಅದಕ್ಕೆ ಸಕ್ಕರೆ ಪುಡಿ ಮತ್ತು ಗಸಗಸೆ ಸೇರಿಸಿ, ಮಿಕ್ಸ್ ಮಾಡಿ. ನಂತರ ಅದಕ್ಕೆ ಕತ್ತರಿಸಿದ ಡ್ರೈ ಫ್ರೂಟ್ಸ್, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಪಕ್ಕಕ್ಕೆ ಇರಿಸಿ.

ಮತ್ತೊಂದು ಬದಿಯಲ್ಲಿ ದೊಡ್ಡ ಮಿಕ್ಸಿಂಗ್ ಬೌಲ್‌ಗೆ ಮೈದಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಅದಕ್ಕೆ ಬಿಸಿ ತುಪ್ಪ ಸುರಿದು, ಕೈಗಳ ಸಹಾಯದಿಂದ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಹಾಲು ಸೇರಿಸಿ ಬೆರೆಸಿಕೊಂಡು, ಒದ್ದೆಯಾದ ಬಟ್ಟೆಯಿಂದ ಹಿಟ್ಟನ್ನು ಮುಚ್ಚಿ ಮತ್ತು 30 ನಿಮಿಷಗಳ ಕಾಲ ಬಿಡಿ.

ತದನಂತರ ಈ ಹಿಟ್ಟಿನ್ನು ಪೂರಿ ಗಾತ್ರಕ್ಕೆ ತಕ್ಕಂತೆ ಲಟ್ಟಿಸಿಕೊಂಡು, ಅದರ ಅಂಚಿಗೆ ಹಾಲನ್ನು ಹಚ್ಚಿ. ತಯಾರಿಸಿದ ತೆಂಗಿನಕಾಯಿಯ ಮಿಶ್ರಣದ ಒಂದು ಚಮಚವನ್ನು ಪೂರಿಯ ಮಧ್ಯದಲ್ಲಿ ಹಾಕಿ. ಈಗ ಅಂಚುಗಳನ್ನು ಒಟ್ಟಿಗೆ ಅಂಟಿಸಿ ಮತ್ತು ಸ್ವಲ್ಪ ಒತ್ತಿರಿ. ನಂತರ ಅಂಚನ್ನು ಒಳಗೆ ಮಡಿಚಿಕೊಂಡು ಬನ್ನಿ. ಇದನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಡೀಪ್ ಫ್ರೈ ಮಾಡಿ. ಈಗ ಬಿಸಿಬಿಸಿ ಗರಿಗರಿಯಾದ ಕರ್ಚಿಕಾಯಿ ಸವಿಯಲು ಸಿದ್ಧ.

Comments are closed.